ಜಿಲ್ಲೆ

ಶಿಕ್ಷಣ, ಆರೋಗ್ಯದಿಂದ ಕಾರ್ಮಿಕರು ವಂಚಿತ

ಕೊಡಗು : ಕಾರ್ಮಿಕರು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ವಂಚಿತರಾಗಿದ್ದಾರೆ ಎಂದು ಎಐಸಿಸಿಟಿಯು ರಾಜ್ಯಾಧ್ಯಕ್ಷ ಕ್ಲಿಫ್ಟನ್ ರೊಜಾರಿಯೋ ಹೇಳಿದರು.
ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಅಖಿಲ ಭಾರತ ಕಾರ್ಮಿಕ ಸಂಘಟನೆ, ಎಐಸಿಸಿಟಿಯು ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಮಿಕರ ಬದುಕಿನ ಪರಿಸ್ಥಿತಿಯನ್ನು ಗಮನಿಸಿದಾಗ ಭಾರತದಲ್ಲಿ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರಿಗೆ ಆಹಾರ ಮತ್ತು ಉದ್ಯೋಗ ಒದಗಿಸಬೇಕು. ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಲ್ಲ. ನಿರುದ್ಯೋಗಿಗಳಿಗೆ ಕೂಡಲೇ ಉದ್ಯೋಗ ನೀಡಬೇಕು. ಕನಿಷ್ಠ ವೇತನ 35 ಸಾವಿರ ರೂ. ನಿಗದಿ ಮಾಡಬೇಕು, ಗುತ್ತಿಗೆ ಪದ್ಧತಿ ರದ್ದಾಗಬೇಕು, ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.


ಎಐಸಿಸಿಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಕೆ.ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು ಲೈನ್ ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಅವರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.


ಇದಕ್ಕೂ ಮೊದಲು ಕಾರ್ಮಿಕರು ತಾಲೂಕು ಮೈದಾನದಿಂದ ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿಯಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಖಾಸಗಿ ಬಸ್ಸು ನಿಲ್ದಾಣ, ಸುಣ್ಣದಬೀದಿ, ಗೋಣಿಕೊಪ್ಪ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟಿಚೌಕಿ ಮಾರ್ಗವಾಗಿ ತಾಲೂಕು ಮೈದಾನದ ವರೆಗೂ ಮೆರವಣಿಗೆ ನಡೆಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಸುಬ್ಬ, ಸಂಘಟನೆಯ ಉಪಾಧ್ಯಕ್ಷ ತೋಲ, ಆದಿವಾಸಿ ಸಂಘದ ಕಾರ್ಯದರ್ಶಿ ಗೌರಿ, ಉಪಕಾರ್ಯದರ್ಶಿ ಬೊಳ್ಕ, ಆದಿವಾಸಿ ಸಂಘಟನೆಯ ಕುಮಾರ, ಕಾವಲ ಇತರರು ಇದ್ದರು.