ಜಿಲ್ಲೆ

ಕೆಲಸದ ವೇಳೆ ಕರೆಂಟ್ ಶಾಕ್ ಗೆ ಕಾರ್ಮಿಕ ಬಲಿ, ಮಾಹಿತಿ ನೀಡದೇ ಶವವನ್ನು ಕೆರೆಯಲ್ಲಿ ಹೂತು ಹಾಕಿದ್ದ ಲೈನ್ ಮೆನ್ ಅರೆಸ್ಟ್

ಚಿಕ್ಕಬಳ್ಳಾಪುರ : ಆತ ಜತೆಗಿರಲಿ ಅಂತಾ ಕೆಲಸಕ್ಕೆ ಒಬ್ಬನನ್ನು ಕರೆದುಕೊಂಡು ಹೋಗಿದ್ದ, ಇದೇ ವೇಳೆ ಅನಾಹುತ ಸಂಭವಿಸಿ ಜತೆಗಿದ್ದವನು ಕರೆಂಟ್ ಶಾಕ್ ಹೊಡೆದ ಸತ್ತ. ಆದರೆ, ಈ ಘಟನೆಯ ಬಗ್ಗೆ ಜನರಿಗೆ ಮಾಹಿತಿ ನೀಡುವುದರ ಬದಲು ಏನೆಲ್ಲ ಮಾಡಿದ ಗೊತ್ತಾ?. ಕೆಲಸಕ್ಕೆ ಜತೆಯಲ್ಲಿ ಬಂದವನು ಸತ್ತು ಹೋಗಿದ್ದಾನೆ ಎನ್ನುವುದು ತಿಳಿದರೆ ನನ್ನ ಮೇಲೆ ಬರುತ್ತೆ ಅಂತಾ ಹೇಳಿ ಮೃತದೇಹವನ್ನು ಕೆರೆಯಲ್ಲಿ ಹೂತು ಹಾಕಿ ಪರಾರಿಯಾಗಿದ್ದವನು ಕೊನೆಗೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಲೈನ್ ಮ್ಯಾನ್ ಚಂದ್ರಶೇಖರ್. ಮೃತನು ರವಿ. ಗುಡಿಬಂಡೆ ತಾಲೂಕಿನ ಬಂದಾರ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ.

*ಘಟನೆಯ ಹಿನ್ನೆಲೆ
ಗುಡಿಬಂಡೆ ತಾಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್ ಕಾಮಗಾರಿ ನಿರ್ವಹಣೆ ಕೆಲಸಕ್ಕೆ ಬೀಚಗಾನಹಳ್ಳಿ ಗ್ರಾಮದ ಲೈನ್ ಮೆನ್ ಚಂದ್ರಕುಮಾರ್ ಸಹ ಕಾರ್ಮಿಕನನ್ನಾಗಿ ರವಿ ಎಂಬಾತನನ್ನು  ಕರೆದುಕೊಂಡು ಹೋಗಿದ್ದ. ಈ ಸಮಯದಲ್ಲಿ  ವಿದ್ಯುತ್ ಸ್ಪರ್ಶಿಸಿ, ಕಂಬದಿಂದ ಬಿದ್ದು ರವಿ ಮೃತಪಟ್ಟಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡ ಲೈನ್ ಮೆನ್ ಕೆಲಸಕ್ಕೆ ಕುತ್ತು ಬರುವುದರ ಭಯದಲ್ಲಿ ಮೃತದೇಹವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತು ಹಾಕಿ, ಏನು ತಿಳಿಯದವನಂತೆ ಪರಾರಿಯಾಗಿದ್ದಾನೆ. ಇತ್ತ ಮೃತನ ಸಂಬಂಧಿಕರು ರವಿ ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದ ತನಿಖೆ ನಡೆಸಿದ ಪೊಲೀಸರು ಲೈನ್ ಮೆನ್ ಚಂದ್ರಕುಮಾರ್ ಮೇಲೆ ಅನುಮಾನಗೊಂಡು ಪರಿಶೀಲಿಸಿದಾಗ, ಆತ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ಪರಾರಿಯಾಗಿರುವುದು ತಿಳಿದು ಬಂದಿದೆ‌. ಇದಕ್ಕೆ ಬಲೆ ಬೀಸಿ ಆಂಧ್ರಪ್ರದೇಶದಲ್ಲಿದ್ದ ಚಂದ್ರಶೇಖರ್‌ನನ್ನು ಬಂಧಿಸಿದೆ.  ಕೊನೆಗೆ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರ ಬಂದಿದೆ. 
ಇನ್ನೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ ಶಿವಕುಮಾರ್, ತಹಸೀಲ್ದಾರ್ ಸಿಗ್ಬತ್ ಉಲ್ಲಾ, ಗುಡಿಬಂಡೆ ಆರಕ್ಷಕ ಉಪ ನಿರೀಕ್ಷಕ ಗಣೇಶ್ ಸೇರಿದಂತೆ ಸ್ಥಳಕ್ಕೆ ವಿಧಿವಿಜ್ಞಾನ ತಂತ್ರಜ್ಞರು, ಜಿಲ್ಲಾ ಸರ್ಜನ್ ಸೇರಿದಂತೆ ವೈದ್ಯಕೀಯ ತಂಡ ಹಾಗೂ ಮೃತನ ಸಂಬಂಧಿಕರ ಸಮ್ಮುಖದಲ್ಲಿ ಶವವನ್ನು ಹೊರತೆಗೆಯಲಾಯಿತು. ಇನ್ನೂ ರವಿ ಶವವನ್ನು ಹೊರತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿನ ಕುರಿತು ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಬ್ಬನಿಂದ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕೆಂದು ಮೃತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ.