* ಒಬ್ಬನ ಕಾಲು ತುಂಡು, ಇನ್ನಿಬ್ಬರು ಗಂಭೀರ
* ಸಿಡಿಲು ಬಡಿದು ಅವಡ?
ಬಿಡದಿ
ಸಮೀಪದ ಉರಗಹಳ್ಳಿ ಕ್ರಷರ್ನಲ್ಲಿ ಕಲ್ಲು ಬಂಡೆ ಸಿಡಿಸಲು ಅಳವಡಿಸುತ್ತಿದ್ದ ಜಿಲೆಟಿನ್ ಸ್ಫೋಟಗೊಂಡು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬನ ಕಾಲು ತುಂಡಾಗಿದೆ, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಜಾರ್ಖಂಡ್ ಮೂಲದ ಕಿಶನ್ ನುನೀಯಾ(45) ಮೃತ. ಸುಬೋಧ್ಪ್ರಸಾದ್ ಕಾಲು ತುಂಡಾಗಿದ್ದು, ವಿಶಾಲ್ ಕುಮಾರ್ರವಾನಿ, ಸಾಮೂಲ್ ಅನ್ಸಾರಿ ಎಂಬುವವರು ಗಂಭೀರ ಗಾಯಗೊಂಡು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಡಿಲ ಹೊಡೆತಕ್ಕೆ ಸ್ಫೋಟ?
ಉರಗಹಳ್ಳಿ ಬಳಿಯ ಕ್ರಷರ್ನಲ್ಲಿ ನಜುಮುದ್ದೀನ್ ಬ್ಲ್ಯಾಸ್ಟ್ರ್ಆಗಿದ್ದ, ಶುಕ್ರವಾರ ಸಂಜೆ ಕಿಶನ್ ಸೇರಿ ಒಟ್ಟು ನಾಲ್ವರು ಬಂಡೆಗಳನ್ನು ಸಿಡಿಸಲು 25 ಕೆಜಿ ತೂಕದ 3 ಜಿಲೆಟಿನ್ ಬಾಕ್ಸ್ ಹಾಗೂ 1 ಡೆಟೋನೇಟರ್ಗೆ ವೈರ್ ಅಳವಡಿಸಿ ಸ್ಫೋಟಿಸಲು ಸಿದ್ಧತೆ ಮಾಡಿದ್ದರು. ಇದೇ ವೇಳೆ ಮಳೆ ಬರುವ ಮುನ್ಸೂಚನೆ ಕಂಡು ನಜುಮುದ್ದೀನ್ ಬೇಗ ಜಿಲೆಟಿನ್ ಅಳವಡಿಸಿ ಎಂದು ಕಾರ್ಮಿಕರಿಗೆ ಸೂಚಿಸುತ್ತಿದ್ದ, ಅಷ್ಟರಲ್ಲೇ ಮಳೆ ಬಂದು ಸಿಡಿಲು ಬಡಿದು ಜಿಲೆಟಿಲ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.
ಆದರೆ, ಸಿಡಿಲ ಹೊಡೆತಕ್ಕೆ ಜಿಲೆಟಿನ್ ಬ್ಲ್ಯಾಸ್ಟ್ ಆಗಿದೆಯೇ ಅಥವಾ ಬ್ಲ್ಯಾಸ್ಟ್ರ್ನ ಅಜಾಗರೂಕತೆಯಿಂದ ಜಿಲೆಟಿನ್ ಸ್ಫೋಟಿಸಿದೆಯೇ ಎಂಬುದು ತನಿಖೆ ನಂತರವಷ್ಟೇ ತಿಳಿಯಬೇಕಿದೆ. ಟನಾ ಸ್ಥಳಕ್ಕೆ ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್, ಸಿಪಿಐ ಶಂಕರ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಷರ್ಗಳ ತಾಣ
ಬಿಡದಿ ಪಟ್ಟಣ ಒಂದು ರೀತಿ ಕ್ರಷರ್ಗಳ ತಾಣವಾಗಿದೆ. ಅದರಲ್ಲೂ ಉರಗಹಳ್ಳಿ ಗ್ರಾಮವೊಂದರಲ್ಲೇ ಹತ್ತಾರು ಕ್ರಷರ್ಗಳಿವೆ. ಕೆಲಸ ಮಾಡುವ ಬಹುತೇಕ ಕಾರ್ಮಿಕರು ಹೊರ ರಾಜ್ಯದವರೇ ಆಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ.
ಮಳೆಯಲ್ಲಿ ಜಿಲೆಟಿನ್ ಅಳವಡಿಸುವಂತಿಲ್ಲ!
ಕ್ರಷರ್ಗಳಲ್ಲಿ ಕಲ್ಲು ಬಂಡೆಗಳನ್ನು ಬ್ಲ್ಯಾಸ್ಟ್ ಮಾಡುವುದು ಮುಖ್ಯವಾದ್ದರಿಂದ ಇದಕ್ಕೆಂದೇ ನುರಿತ ಬ್ಲ್ಯಾಸ್ಟ್ರ್ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಮಳೆ ಬರುವ ಸೂಚನೆಯಿದ್ದರೆ ಬಂಡೆಗಳನ್ನು ಸಿಡಿಸಲು ಜಿಲೆಟಿನ್ ಕಡ್ಡಿಗಳನ್ನು ಅಳವಡಿಸುವಂತಿಲ್ಲ. ಮಳೆ ವಾತಾವರಣ ಕಂಡು ಬಂದಿದ್ದರೂ ಏಕೆ ಸ್ಫೋಟಕಗಳನ್ನು ಅಳವಡಿಸುತ್ತಿದ್ದರು? ಎಂಬುದು ಅನುಮಾನ ಮೂಡಿಸಿದೆ.
ಸ್ಫೋಟವಾಗದವು ನಿಷ್ಕ್ರಿಯ
ಕ್ರಷರ್ನಲ್ಲಿ ಬಂಡೆಗಳನ್ನು ಸಿಡಿಸಲು ಅಳವಡಿಸಿದ್ದ 3 ಬಾಕ್ಸ್ ಜಿಲೆಟಿನ್ ಕಡ್ಡಿಗಳ ಪೈಕಿ ಒಂದು ಭಾಗದಲ್ಲಷ್ಟೇ ಸ್ಫೋಟಗೊಂಡಿದ್ದು, ಉಳಿದ ಕಡೆ ಸಿಡಿಮದ್ದು ಸ್ಫೋಟಗೊಂಡಿರಲಿಲ್ಲ. ಹಾಗಾಗಿ ಪೊಲೀಸರು ಶನಿವಾರ ನ್ಯಾಯಾಲಯದ ಅನುಮತಿ ಪಡೆದು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯಿಂದ, ಸ್ಫೋಟವಾಗದಿರುವ ಜಿಲೆಟಿನ್ ಕಡ್ಡಿ ಹಾಗೂ ಡೆಟೋನೇಟರ್ಗಳನ್ನು ನಿಷ್ಕ್ರಿಯಗೊಳಿಸಿದರು.