ಹುಬ್ಬಳ್ಳಿ; ಬಿಡಿಕೆ ಕಂಪನಿ ಕೆಲಸದಿಂದ ವಜಾ ಮಾಡಿದಕ್ಕೆ ಬೇಸತ್ತು ಕಾರ್ಮಿಕನೊಬ್ಬ ತಾಲೂಕಿನ ಗೋಕುಲ ಗ್ರಾಮದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ನಿಂಗನಗೌಡ ಗೌಡರ (56)ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಗೋಕುಲ ರಸ್ತೆಯ ಬಿಡಿಕೆ ಕಂಪನಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತಿದ್ದ. ನಿಂಗನಗೌಡ ಗೌಡರ ಸೇರಿ ಕೆಲ ಕಾರ್ಮಿಕರನ್ನು ಗುಜರಾತ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಈ ವರ್ಗಾವಣೆ ಕಾನೂನು ಬಾಹಿರವಾಗಿದ್ದು, ದುರುದ್ದೇಶದಿಂದ ಕೂಡಿದೆ.
ನಮ್ಮ ವರ್ಗಾವಣೆ ಆದೇಶ ರದ್ದು ಮಾಡಬೇಕು. ಇಲ್ಲವೇ ಪರ್ಯಾಯವಾಗಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಕಂಪನಿ ಸ್ಪಂದಿಸಲಿಲ್ಲ. ವಜಾ ಪತ್ರ ಮನೆಗೆ ಕಳುಹಿಸಿದ್ದರಿಂದ ಬೇಸತ್ತು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿಂಗನಗೌಡ ಪುತ್ರ ಹಣಮಂತಗೌಡ ಗೋಕುಲ ರೋಡ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.