*ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಕರೆ
* ಎಸ್‌ಎಸ್‌ಎಲ್ಸಿ ಫಲಿಂತಾಂಶ ಉತ್ತಮ ಪಡಿಸಲು ಶಿಕ್ಷಕರ ಸಭೆ
ರಾಮನಗರ
ಖುಷಿಯ ವಾತಾವರಣ ನಿರ್ಮಾಣ ಮಾಡಿದರೆ ಖಂಡಿತವಾಗಿ ಮಕ್ಕಳು ಶಾಲೆಗೆ ಬರುತ್ತಾರೆ. ಶಿಕ್ಷಕರೂ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಮೂಲಕ ಅವರನ್ನು ದಡ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಕರೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿಂತಾಂಶ ಉತ್ತಮ ಪಡಿಸಲು ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಹೇಗೆ ಇರಲಿ, ಯಾರೇ ಇರಲಿ ಅವರನ್ನು ಕೀಳರಿಮೆಯಿಂದ ಕಾಣುವುದು ಬೇಡ. ಸ್ನೇಹಿತರನ್ನು ಭೇಟಿ ಆಗಲೋ, ತಮ್ಮ ನೆಚ್ಚಿನ ಶಿಕ್ಷಕರ ಮಾತುಗಳನ್ನು ಕೇಳಲೋ ಯಾವುದೇ ಕಾರಣಕ್ಕೆ ಶಾಲೆಗೆ ಬಂದರೂ ಅವರು ಖುಷಿಯಿಂದ ಇರಬೇಕು. ಇದರಿಂದಾಗಿ ಅವರು ಹಂತ ಹಂತವಾಗಿ ಕಲಿಕೆ ಕಡೆಗೆ ಜಾರುತ್ತಾರೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ಆತ್ಮ ತೃಪ್ತಿಯಿಂದ ಮಾಡುವ ಮೂಲಕ ಮಕ್ಕಳನ್ನು ದಡ ಮುಟ್ಟಿಸುವ ಕೆಲಸ ಮಾಡಬೇಕು. ನಿಮ್ಮ ಕೆಲಸ ಶಾಲಾ ಆವರಣದಲ್ಲಿ ಸಕಾರಾತ್ಮಕ ಪರಿಸರವನ್ನು ಸೃಷ್ಟಿ ಮಾಡುವುದಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಹಿಂದೆ ಗುರುಗಳಿಗೆ ಗೌರವ ಕೊಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಅದರಿಂದ ಬೇಸರಪಟ್ಟುಕೊಳ್ಳುವುದು ಬೇಡ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ಮೊದಲು ಮಕ್ಕಳಿಗೆ ಪ್ರೇರಣದಾಯಕ ಕಥೆಗಳನ್ನು ಹೇಳುವ ಮೂಲಕ, ಇನ್ನಾವುದೋ ಮಾರ್ಗದ ಮೂಲಕ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು. ನಂತರ ಸೈನಿಕರ ರೀತಿ ಅವರ ಹಿಂದೆ ಬಿದ್ದು ಗುರಿಯ ಕಡೆಗೆ ಸಾಗುವಂತೆ ಮಾಡಬೇಕು ಎಂದರು.
ಇಂದು ಮಕ್ಕಳ ಪಾಲಿಗೆ ಇಂಗ್ಲಿಷ್ ಮತ್ತು ಗಣಿತ ಎರಡೂ ವಿಷಯಗಳು ಕಷ್ಟಕರವಾಗಿದೆ. ಕಾರಣ ಅವರಿಗೆ ಮೂಲದ ಬಗ್ಗೆ ತಿಳಿವಳಿಕೆ ನೀಡದೇ ಇರುವುದು. ಈ ಹಿನ್ನೆಲೆಯಲ್ಲಿ ನಿಜ ಜೀವನಕ್ಕೆ ಹತ್ತಿರವಾಗುವ ಉದಾಹರಣೆಗಳೊಂದಿಗೆ ಎರಡೂ ವಿಷಯಗಳನ್ನು ಕಲಿಸಿಕೊಡಿ, ಇದರಿಂದ ಬೇಗ ಕಲಿಯಲು ಸಹಾಯಕವಾಗುತ್ತದೆ ಎಂದರು.
ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಮಾತನಾಡಿ, ಮಕ್ಕಳಿಗೆ ಹಿಂದಿನ ಹಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಕೊಡುವ ಮೂಲಕ ಪರೀಕ್ಷೆಗೆ ಸಿದ್ದಗೊಳಿಸಿ. ಪ್ರಶ್ನೆಗಳನ್ನು ಯಾವೆಲ್ಲಾ ರೀತಿಯಲ್ಲಿ ಕೇಳಬಹುದು, ಹೇಗೆ ಉತ್ತರಿಸಬೇಕು ಎನ್ನುವುದನ್ನು ಅಭ್ಯಾಸ ಮಾಡಿಸಿ. ಇದರ ಜತೆಗೆ ಮುದ್ದಾದ ಬರವಣಿಗೆಯೂ ಮುಖ್ಯವಾಗಿದ್ದು, ಬರವಣಿಗೆಯನ್ನೂ ತಪ್ಪದೇ ಅಭ್ಯಾಸ ಮಾಡುವಂತೆ ಮಾಡಿ ಎಂದು ಶಿಕ್ಷಕರಿಗೆ ಸೂಚಿಸಿದರು.
ಹೆಚ್ಚಿನ ಫಲಿತಾಂಶ ಬೇಕು ಎನ್ನುವುದು ನಿಜ, ಹಾಗೆಂದ ಮಾತ್ರಕ್ಕೆ ಗುಣಮಟ್ಟದ ಫಲಿತಾಂಶವನ್ನು ಬಿಡಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಸಿಸಿ ಕ್ಯಾಮರಾ ಇರಲಿದೆ ಎಂದು ತಿಳಿಸಿದರು. ಶಿಕ್ಷಣ ಇಲಾಖೆ ಕೈಗೊಂಡಿರುವ ಮಾಹಿತಿಯನ್ನು ತಿಳಿಸಿಕೊಟ್ಟ ಶಿಕ್ಷಣ ಇಲಾಖೆ ಅಧಿಕಾರಿ ಚಿನ್ನಸ್ವಾಮಿ, ಪ್ರತಿ ವಿಷಯಕ್ಕೆ ಸಂಬಂಧಿಸಿದ ಯಶಸ್ಸು ಎಂಬ ವಿಶೇಷ ಪುಸ್ತಕ ವಿತರಣೆಗೆ ಸಿದ್ಧತೆ, ಮಕ್ಕಳಿಗೆ ಹೆಚ್ಚುವರಿ ಅವಧಿ ಕಲಿಕೆ, ಯಾವ ವಿಷಯದಲ್ಲಿ ಮಕ್ಕಳು ಹಿಂದುಳಿದಿದ್ದಾರೆ ಎನ್ನುವುದನ್ನು ಗಮನಿಸಿ ಅಂತಹ ವಿಷಯಗಳಿಗೆ ಹೆಚ್ಚು ಗಮನ, ಪ್ರೇರಣಾ ಕಾರ್ಯಾಗಾರ ಆಯೋಜನೆ, ಕಲಿಕೆಗಾಗಿ ಮಕ್ಕಳನ್ನು ಶಿಕ್ಷಕರಿಗೆ ದತ್ತು ನೀಡುವುದು, ರಸ ಪ್ರಶ್ನೆ ಕಾರ್ಯಕ್ರಮ, ಪಾಲಕರ ಸಭೆ ನಡೆಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿ ಮಾಹಿತಿ ನೀಡುವುದು, ಗುಂಪು ಅಧ್ಯಯನ ಸೇರಿ 21 ವಿವಿಧ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಅಮೃತ ಮತ್ತು ತಂಡದಿಂದ ಪ್ರಾರ್ಥನೆ ನಡೆಯಿತು. ಡಿಡಿಪಿಐ ಬಸವರಾಜೇಗೌಡ ಇದ್ದರು.
ಇರುಳಿಗ ಸಮೂದಾಯದ ಮಕ್ಕಳು ಶಾಲೆಗೆ ಬರುತ್ತಿಲ್ಲ, ಕರೆಯಲು ಹೋದರೆ ಓಡಿ ಹೋಗುತ್ತಿದ್ದಾರೆ. ಪಾಲಕರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಶಿಕ್ಷಕರ ಕೊರತೆ ನಡುವೆ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ.
ಎನ್.ಶಿವಲಿಂಗಯ್ಯ
ಮುಖ್ಯ ಶಿಕ್ಷಕರು, ಚಿಕ್ಕ ಮುದವಾಡಿ, ಸರ್ಕಾರಿ ಪ್ರೌಢಶಾಲೆ
ಎಸ್‌ಎಸ್‌ಎಲ್ ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ಕ್ಲಿಯರ್ ಎಸ್‌ಎಸ್‌ಎಲ್‌ಸಿ ಇನ್ 90 ಡೇಸ್ ಎನ್ನುವ ಘೋಷ ವಾಕ್ಯದೊಂದಿಗೆ ಕೆಲಸ ಮಾಡಿದರೆ ಖಂಡಿತವಾಗಿ ಉತ್ತಮ ಫಲಿತಾಂಶ ದೊರೆಯಲಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯದಲ್ಲೂ ಬದಲಾವಣೆ ಕಾಣ ಬಹುದಾಗಿದೆ.
ಯಶವಂತ ವಿ ಗುರುಕರ್, ಜಿಲ್ಲಾಧಿಕಾರಿ