ಅಖಂಡ ಭಾರತ ಸಂಕಲ್ಪ ಸಂದೇಶ ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪದಲ್ಲಿ ವಾಹನ ಜಾಥಾ ನಡೆಯಿತು. 
ಜಿಲ್ಲೆ

ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸವಾಗಲಿ

ಅಭಿನಯ್ ಎಚ್.ಎಂ

ಗೋಣಿಕೊಪ್ಪ: ಹಿಂದುಗಳು ಜಾಗೃತವಾಗುವ ಕಾಲ ಸನ್ನಿಹಿತವಾಗಿದ್ದು, ಹಿಂದುಗಳು ಒಗ್ಗಟ್ಟಾಗುವ ಮೂಲಕ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ವಿಎಚ್‌ಪಿಯ ನಿಕಟಪೂರ್ವ ಪ್ರಾಂತ ಪ್ರಮುಖ್ ಮುರಳಿಕೃಷ್ಣ ಹಂಸತಡ್ಕ ಸಲಹೆ ನೀಡಿದರು.

ಹಿಂದು ಜಾಗರಣ ವೇದಿಕೆ ವತಿಯಿಂದ ಸೋಮವಾರ ಇಲ್ಲಿನ ಆರ್‌ಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಂಡ ಭಾರತ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಬೇಕೆಂದು ಹೇಳಿದರು.

ನವ ಭಾರತದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅನ್ಯ ದೇಶಗಳು ಭಾರತದ ಹಿನ್ನೆಲೆಯನ್ನು ಒಪ್ಪಿಕೊಂಡು ಭಾರತಕ್ಕೆ ವಿಶೇಷವಾಗಿ ಗೌರವ ನೀಡುವ ಮಟ್ಟಕ್ಕೆ ಬೆಳೆದಿದೆ. ತ್ಯಾಗ, ವೀರತ್ವದ ಸಂಕೇತವಾಗಿ ಸ್ವಾತಂತ್ರೃ ದಿನ ಆಚರಿಸಲಾಗುತ್ತಿದೆ. ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗಿರುವುದು ನೋವಿನ ಸಂಗತಿ. ಹಾಗಾಗಿ ಅಖಂಡ ಭಾರತ ನಿರ್ಮಾಣಕ್ಕೆ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕಿದೆ ಎಂದರು.

ಬೃಹತ್ ಜಾಥಾ: ಪೊನ್ನಂಪೇಟೆಯಿಂದ ಗೋಣಿಕೊಪ್ಪದವರೆಗೆ ನಡೆದ ಜಾಥಾದಲ್ಲಿ 400ಕ್ಕೂ ಹೆಚ್ಚು ವಾಹನಗಳು ಪಾಲ್ಗೊಂಡಿದ್ದವು. ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭಗೊಂಡ ಜಾಥಾ, ಗೋಣಿಕೊಪ್ಪ ಬೈಪಾಸ್ ಮೂಲಕ ಉಮಾಮಹೇಶ್ವರಿ ದೇವಸ್ಥಾನ ವೃತ್ತ ತಲುಪಿ ಮುಖ್ಯರಸ್ತೆಯಲ್ಲಿ ಸಾಗಿತು. ನಂತರ ಹರಿಶ್ಚಂದ್ರಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಾಥಾ ಅಂತ್ಯಗೊಂಡಿತು. ಈ ವೇಳೆ ಕೇಸರಿ ಧ್ವಜದೊಂದಿಗೆ ವಾಹನಗಳು ರಾರಾಜಿಸಿದವು.

ಜಾಥಾ ಹಿನ್ನೆಲೆಯಲ್ಲಿ ತಿತಿಮತಿ, ಹಾತೂರು, ಪಾಲಿಬೆಟ್ಟ, ಪೊನ್ನಂಪೇಟೆ ರಸ್ತೆಯಿಂದ ಬರುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಪೊಲೀಸ್ ಇಲಾಖೆ ಪಟ್ಟಣದಲ್ಲಿ ವಾಹನ ದಟ್ಟಣೆಯಾಗದಂತೆ ಕ್ರಮ ಕೈಗೊಂಡಿತ್ತು.

ಆರ್‌ಎಂಸಿ ಬಳಿ ಜಾಥಾವನ್ನು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸಿ.ಕೆ.ಬೋಪಣ್ಣ, ಪ್ರಮುಖರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಪಂದ್ಯಂಡ ಹರೀಶ್, ಅಮೃತ್‌ರಾಜ್ ಸೇರಿದಂತೆ ಇತರ ಪ್ರಮುಖರು ಬರಮಾಡಿಕೊಂಡರು.

ವಿರಾಜಪೇಟೆ ಡಿವೈಎಸ್ಪಿ ಮೋಹನ್‌ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್ ಮುಂದಾಳತ್ವದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ನಿವೃತ್ತ ಬ್ಲಾಕ್ ಕ್ಯಾಟ್ ಕಮಾಂಡೊ ಕ್ಯಾಪ್ಟನ್ ಮಲ್ಲೇಂಗಡ ಎಂ.ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಹ ಪ್ರಮುಖ್ ಅಲ್ಲುಮಾಡ ಶರತ್ ಪೆಮ್ಮಯ್ಯ, ತಾಲೂಕು ಸಂಯೋಜಕ ಸುಳ್ಳಿಮಾಡ ಪಿ.ಸಂಪತ್, ಲೋಹಿತ್, ಭೀಮಯ್ಯ ಇತರರಿದ್ದರು.