ಜಿಲ್ಲೆ

ಅಸಮಾನತೆ ಹೋಗಲಾಡಿಸುವ ಪ್ರಯತ್ನಗಳಾಬೇಕು

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಒಂದು ನ್ಯಾಯಸಮ್ಮತ ಸಮಾಜವನ್ನು ಸ್ಥಾಪಿಸಲು ಭಾರತದ ಸಂವಿಧಾನದಲ್ಲಿ ಹಲವು ವಿಧಿ ನಿಯಮಗಳನ್ನು ಜಾರಿಗೊಳಿಸಿದೆ, ಅವುಗಳನ್ನು ಸಮಾಜದ ಬೆಳವಣಿಗೆಯಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ಕಾಣಬಹುದು ಹಾಗಾಗಿ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವ ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ಆಡಳಿತ ತರಬೇತಿ ಸಂಸ್ಥೆ ಸಹಯೋಗದಲ್ಲಿ ದೇವನಹಳ್ಳಿಯ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಕುರಿತ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ಸಮಾನತೆಯ ಅರಿವು ತಿಳಿದುಕೊಳ್ಳುವುದರಲ್ಲಿ ನಾವೆಲ್ಲ ಹಿಂದೆಯೇ ಉಳಿದಿದ್ದೇವೆ. ಅಂಬೇಡ್ಕರ್ ಅವರು ಹಲವು ದೇಶಗಳನ್ನು ಸುತ್ತಿ ಅಲ್ಲಿನ ಭಾಷೆ, ಕಾನೂನು ವ್ಯವಸ್ಥೆಗಳನ್ನು ತಿಳಿದುಕೊಂಡು ನಮ್ಮ ದೇಶದ ಸಂಸ್ಕೃತಿ, ವ್ಯವಸ್ಥೆ ಎಲ್ಲವನ್ನೂ ಪರಿಗಣಿಸಿ ಸಧೃಡ ಸಂವಿಧಾನ ನೀಡಿದ್ದಾರೆ ಎಂದರು. ಹಿಂದಿನ ಕಾಲದಿಂದಲೂ ಈ ಅಸಮಾನತೆ ಎನ್ನುವುದು ಬೆಳೆಯುತ್ತಲೇ ಬಂದಿದೆ ಹಾಗಾಗಿ ನಾವೆಲ್ಲರು ಸಾಮಾಜಿಕ ನ್ಯಾಯದ ಬಗ್ಗೆ ತಿಳಿದುಕೊಳ್ಳಬೇಕು ಆಗ ಮಾತ್ರ ಸರ್ವರಿಗೂ ಸಮಾನತೆ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗುತ್ತದೆ ಎಂದರು.

ಕೆಟ್ಟ ಸಂಗತಿಯಾಗಿದೆ: ಎಲ್ಲ ಕಾನೂನು ಕ್ರಮ ಇದ್ದರೂ ಈಗಲೂ ಜಾತಿ ಅಸಮಾನತೆ, ಜಾತಿನಿಂದನೆ ಹಾಗೂ ಸಾಮಾಜಿಕ ಅಸಮಾನತೆ ಸಮಾಜದಲ್ಲಿ ನಡೆಯುತ್ತಿರುವುದು ಕೆಟ್ಟ ಸಂಗತಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸಿ.ಕೆ ಬಾಬಾ ಹೇಳಿದರು. ಯಾವುದೇ ವ್ಯಕ್ತಿಗೆ ಹುಟ್ಟಿನಿಂದ ಸಾವಿನವರೆಗೂ ಜಾತಿ, ವರ್ಣ, ಲಿಂಗ, ಧರ್ಮದ ಆಧಾರದ ಮೇಲೆ ಬೇಧ ಭಾವ ಮಾಡಬಾರದು. ಸಮಾಜದಲ್ಲಿ ಸಮಾನತೆ ಕಾಪಾಡುವುದು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ಸಾಮಾಜಿಕ ನ್ಯಾಯದ ಮುಖ್ಯ ಉದ್ದೇಶವಾಗಿರುತ್ತದೆ ಹಾಗಾಗಿ ದೌರ್ಜನ್ಯವಾದರೆ ಅಥವಾ ದೌರ್ಜನ್ಯ ಕಂಡು ಬಂದರೆ ಯಾವುದೇ ಭಯ ಪಡದೇ ದೂರು ನೀಡುವಂತೆ ತಿಳಿಸಿದರು.

ವಿಶೇಷ ಕಾಯ್ದೆ ಇದೆ: ವಿಧಿ 14-18 ರವರೆಗೂ ಜಾತಿನಿಂದನೆ ಮತ್ತು ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ. ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ತಾರತಮ್ಯವನ್ನು ತಡೆಯುವ ಕಾನೂನು ಇದಾಗಿದೆ ಎಂದು ಡಿವೈಎಸ್ಪಿ ರವಿ ತಿಳಿಸಿದರು. 1989 ರ ದೌರ್ಜನ್ಯ ತಡೆ ಕಾಯ್ದೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು, ಅಂತಹ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಯಾವುದೇ ಅನುಸೂಚಿತ ಜಾತಿ ಮತ್ತು ಪಂಗಡದವರಿಗೆ ಬಾಯಿಗೆ ವಸ್ತುವನ್ನು ತುರುಕಿದರೆ, ಮನೆಮುಂದೆ ಸತ್ತ ಪ್ರಾಣಿ ಹಾಕಿದರೆ, ಎಲ್ಲರ ಮುಂದೆ ತಲೆ ಮತ್ತು ಮೀಸೆ ಬೋಡಿಸಿದರೆ ಅಥವಾ ತೆಗೆದರೆ, ಜೀತಕ್ಕೆ ಬಳಸಿಕೊಂಡರೆ, ದೇವದಾಸಿ ಪದ್ಧತಿ, ಅಡ್ಡಿಪಡಿಸುವುದು, ಭಯ ಹುಟ್ಟಿಸುವುದು, ಮತ ಹಾಕುವುದನ್ನು ತಡೆಯುವುದು ಅಥವಾ ನೀನು ನಮ್ಮ ಪಕ್ಷಕ್ಕೆ ಮತ ಹಾಕಬೇಕು ಎನ್ನುವುದು, ಈ ರೀತಿ ಅವರ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಅಡಚಣೆಯನ್ನು ಮಾಡಬಾರದು ಮಾಡಿದರೆ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬಹುದು. ಇಂಥವರ ವಿರುದ್ಧ 6 ತಿಂಗಳು ಅಥವಾ ಜೀವಿತವಧಿವರೆಗೂ ಶಿಕ್ಷೆಯಾಗುವ ಅವಕಾಶವಿರುತ್ತದೆ ಎಂದರು.

ಕಾರ್ಯಾಗಾರ:

ಅರಿವು ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಪರಿಕಲ್ಪನೆ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಯ ಅಧಿನಿಯಮ ಮತ್ತು ನಿಯಮಗಳ ಬಗ್ಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ವಿಷಯವನ್ನು ಕುರಿತು ಕಾರ್ಯಗಾರ ನಡೆಸಲಾಯಿತು.