ತಿ.ನರಸೀಪುರ: ತಾಲೂಕಿನ ಟಿ.ಬೆಟ್ಟಹಳ್ಳಿ ಗ್ರಾಮದ ಬಳಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಯಕಲ್ಪಕ್ಕೆ ಕಾಲ ಕೂಡಿ ಬಂದಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ಮುಡುಕುತೊರೆ ಸಮೀಪದ ತಲಕಾಡು ಹೋಬಳಿ ಮಟ್ಟದ ಅಂಬೇಡ್ಕರ್ ಭವನವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲು ತಳಪಾಯ ಹಾಗೂ ಮೊದಲ ಮಹಡಿಯ ನೆಲಹಾಸನ್ನು ನಿರ್ಮಾಣ ಮಾಡಲಾಗಿತ್ತು. ಹಿಂದಿನ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಸಮಾಜ ಕಲ್ಯಾಣ ಸಚಿವರು ಸ್ವಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ್ದ ಭವನ ಕಾಮಗಾರಿಯನ್ನು ಪುನರಾರಂಭಿಸಲು ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ.
ತಲಕಾಡು ಹೋಬಳಿ ಮಟ್ಟದಲ್ಲಿ ಯಾವುದೇ ಅಂಬೇಡ್ಕರ್ ಭವನ ಇಲ್ಲದಿರುವುದು ಸಮುದಾಯಕ್ಕೆ ಕೊರತೆಯಾಗಿತ್ತು. ಭವನಕ್ಕೆ ಸೂಕ್ತ ನಿವೇಶನಕ್ಕಾಗಿ ಮುಡುಕುತೊರೆ ಮುಖ್ಯ ರಸ್ತೆಯಲ್ಲಿರುವ ಟಿ.ಬೆಟ್ಟಹಳ್ಳಿ ಬಳಿ ಪ್ರವಾಸಿ ಮಂದಿರ ನಿವೇಶನವನ್ನು ಆಯ್ಕೆ ಮಾಡಿಕೊಂಡು ಕಳೆದ 2017ರಲ್ಲಿ ಅಂದಿನ ಸರ್ಕಾರದಲ್ಲಿ ಸಚಿವ ಮಹದೇವಪ್ಪ ಅವರು 1 ಕೋಟಿ ರೂ. ಮಂಜೂರು ಮಾಡಿ, ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು. ಜಿಪಂ ತಾಂತ್ರಿಕ ಉಪ ವಿಭಾಗದ ಅಧಿಕಾರಿಗಳು ಭವನ ಕಾಮಗಾರಿಯನ್ನು ಆರಂಭಿಸಿದ್ದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಸರ್ಕಾರ, ಶಾಸಕರು ಬದಲಾಗಿದ್ದರಿಂದ ಅನುದಾನ ಸ್ಥಗಿತಗೊಂಡಿತ್ತು. ಹೀಗಾಗಿ ಅಂಬೇಡ್ಕರ್ ಭವನ ನಿರ್ಮಾಣ ಅರ್ಧಕ್ಕೆ ನಿಂತು ಹೋಗಿತ್ತು. ಸತತ ಏಳು ವರ್ಷಗಳ ಕಾಲ ಪಾಳು ಬಿದ್ದಿದ್ದ ಅಂಬೇಡ್ಕರ್ ಭವನದ ಕಾಯಕಲ್ಪಕ್ಕೆ ಕಾಲ ಕೂಡಿಬಂದಿದ್ದು, 2025ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ 5 ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಮಂಜೂರು ಮಾಡಿದೆ. ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಪುನರಾರಂಭಗೊಳ್ಳದ ಕಾಮಗಾರಿ:
ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ.ಗಳನ್ನು ಮಂಜೂರು ಮಾಡಿ ಆರೇಳು ತಿಂಗಳುಗಳೇ ಆಗಿದ್ದರೂ ಕಾಮಗಾರಿಯನ್ನು ಸಂಬಂಧಿಸಿದ ತಾಂತ್ರಿಕ ಇಲಾಖೆಯ ಅಧಿಕಾರಿಗಳು ಪುನರಾರಂಭಿಸಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾಳು ಬಿದ್ದಿದ್ದ ಅಂಬೇಡ್ಕರ್ ಭವನದ ಅರೆಬರೆ ಕಟ್ಟಡದ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಮತ್ತೆ ಆ ಕಡೆ ತಿರುಗಿಯೂ ನೋಡಿಲ್ಲ.
ಟೆಂಡರ್ ಪ್ರಕ್ರಿಯೆ ನೆಪದಲ್ಲಿ ಕೈ ಕಟ್ಟಿ ಕುಳಿತ್ತಿದ್ದಾರೆ. ಸಚಿವರು ಹಾಗೂ ಸಂಸದರೂ ಈ ಕಡೆ ಗಮನಹರಿಸಿಲ್ಲ. ರಾಜ್ಯ ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭಗೊಳ್ಳದಿರುವುದಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ಕೇಳಿಬರುತ್ತಿದೆ.