ಕುಷ್ಟಗಿ ತಾಲೂಕು ನೆರೆಬೆಂಚಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ರೈಲು ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಸುತ್ತಲಿನ ರೈತರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಂದಾಯ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ರವಿ ಅಂಗಡಿ, ರೈಲ್ವೆ ಇಲಾಖೆಯ ಮುಖ್ಯ ಇಂಜಿನಿಯರ್ ಟಿ.ವೆಂಕಟರಾವ್, ಡೆಪ್ಯೂಟಿ ಇಂಜಿನಿಯರ್ ರವೀಂದ್ರ ಬಿರಾದಾರ್, ಸಿಪಿಐ ಯಶವಂತ ಬಿಸನಳ್ಳಿ ಇತರರಿದ್ದರು. ಗ್ರಾಮಸ್ಥ ಬಸವರಾಜ ಗುರಿಕಾರ ಸಮಸ್ಯೆ ಹೇಳಿಕೊಂಡರು.  
ಜಿಲ್ಲೆ

ರೈಲು ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಿಸಲು ರೈತರ ಪಟ್ಟು

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ತಾಲೂಕಿನ ನೆರೆಬೆಂಚಿ ಹೊರವಲಯದಲ್ಲಿ ಹಾದು ಹೋಗಿರುವ ರೈಲು ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಸುತ್ತಲಿನ ರೈತರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರವಿ ಅಂಗಡಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮೇಲ್ಸೇತುವೆ ನಿರ್ಮಿಸುವ ಲಿಖಿತ ಭರವಸೆ ನೀಡಿದರು.

ಗ್ರಾಮದಿಂದ ನಿಡಶೇಸಿಗೆ ಸಂಪರ್ಕ ಕಲ್ಪಿಸುವ ರಸ್ತೆ (ಎತ್ತಿನ ಬಂಡಿ ಜಾಡು) ಮಧ್ಯೆದಲ್ಲಿ ಗದಗ-ವಾಡಿ ರೈಲು ಮಾರ್ಗ ಹಾದು ಹೋಗಿದೆ. ಮಾರ್ಗದ ಆಚೆಗೆ ನೆರೆಬೆಂಚಿ ಹಾಗೂ ಕುಷ್ಟಗಿ ಸೀಮಾ ವ್ಯಾಪ್ತಿಯ ಹಲವು ರೈತರ ಜಮೀನುಗಳಿದ್ದು, ಕೃಷಿ ಚಟುವಟಿಕೆಗೆ ರೈತರು ಇದೇ ರಸ್ತೆ ಅವಲಂಬಿಸಿದ್ದಾರೆ. ಕಾಮಗಾರಿ ಆರಂಭಿಸುವ ಮುನ್ನವೇ ಮೇಲ್ಸೇತುವೆ ನಿರ್ಮಿಸುವಂತೆ ರೈತರು ಒತ್ತಾಯಿಸಿದ್ದರು. ನಿರ್ಮಿಸುವ ಭರವಸೆ ನೀಡಿದ್ದ ರೈಲ್ವೆ ಇಲಾಖೆ ಹಳಿಗಳನ್ನು ಅಳವಡಿಸಲಾರಂಭಿಸಿದೆ. ಮೇಲ್ಸೇತುವೆ ನಿರ್ಮಿಸುವವರೆಗೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಇಲಾಖೆ ಅಧಿಕಾರಿಗಳಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದರು.

ನಿಡಶೇಸಿ ಸಂಪರ್ಕಿಸುವ ರಸ್ತೆಗೂ ಮುಂಚೆ 300ಮೀಟರ್ ಅಂತರದಲ್ಲಿ ಕೆಳಸೇತುವೆ ನಿರ್ಮಿಸಲಾಗಿದೆ. ಅಲ್ಲಿಂದಲೇ ಓಡಾಡುವಂತೆ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಲು ಯತ್ನಿಸಿದರು. ಜಮೀನುಗಳಲ್ಲಿ ಬೋರ್‌ವೆಲ್ ಕೊರೆಯಿಸುವ ವೇಳೆ ವಾಹನ ಬಂದು ಹೋಗಲು, ರಾಶಿ ಸಂದರ್ಭದಲ್ಲಿ ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಯಲ್ಲಿ ಕೃಷಿ ಉತ್ಪನ್ನ, ಮೇವು ಹೊತ್ತು ತರಲು ಕೆಳಸೇತುವೆಯಲ್ಲಿ ಸಾಧ್ಯವಾಗುವುದಿಲ್ಲ. ಅಲ್ಲದೆ ಮಳೆಗಾಲದಲ್ಲಿ ನೀರು ಸಂಗ್ರಹಗೊಂಡರೆ ತೊಂದರೆಯಾಗುತ್ತದೆ. ಹೀಗಾಗಿ ಮೇಲ್ಸೇತುವೆ ನಿರ್ಮಿಸಲೇಬೇಕು ಎಂದು ರೈತರು ಪಟ್ಟುಹಿಡಿದರು. ಮೇಲ್ಸೇತುವೆ ನಿರ್ಮಿಸಲು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಿಸುವುದಾಗಿ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಮುಖ್ಯ ಇಂಜಿನಿಯರ್ ಟಿ.ವೆಂಕಟರಾವ್ ತಿಳಿಸಿದರು.

ಲಿಖಿತ ಭರವಸೆ ನೀಡುವಂತೆ ರೈತರು ಒತ್ತಾಯಿಸಿದಾಗ ಮುಂಚಿತವಾಗಿ ಮುದ್ರಿಸಿ ತಂದಿದ್ದ ಪತ್ರಕ್ಕೆ ಅಧಿಕಾರಿಗಳು ಸಹಿ ಮಾಡಿ ರೈತರಿಗೆ ನೀಡಿದರು. ಡೆಪ್ಯೂಟಿ ಇಂಜಿನಿಯರ್ ರವೀಂದ್ರ ಬಿರಾದಾರ್, ಎಇಇ ಅಶೋಕ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ, ಕಂದಾಯ ನಿರೀಕ್ಷಕರಾದ ಉಮೇಶಗೌಡ, ಶರಣಯ್ಯ ನಿಡಗುಂದಿಮಠ, ಗ್ರಾಪಂ ಪಿಡಿಒ ರಮೇಶ ಬೆಳ್ಳಿಹಾಳ, ರೈತರಾದ ದುಗ್ಗನಗೌಡ ಪೊಪಾ, ಮರಿಯಪ್ಪ ಬಂಡಿಹಾಳ, ಕರಿಯಪ್ಪ ಬಂಡಿಹಾಳ, ಬಾಲಾಜಿ ಬಂಡ್ಯಾಳ, ಬಸಣ್ಣ ಬಂಡಿಹಾಳ, ಕಳಕಪ್ಪ ಪೊಪಾ, ಉಸ್ಮಾನ್‌ಸಾಬ್ ಆದೋನಿ ಇತರರಿದ್ದರು.