ಮಸ್ಕಿ: ತುಂಡು ಗುತ್ತಿಗೆ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಎಇಇ ವೆಂಕಟೇಶಗೆ ಮನವಿ ಸಲ್ಲಿಸಿದರು.
ಒಂದರಿಂದ 5 ಲಕ್ಷ ರೂಪಾಯಿವರೆಗಿನ ವಿದ್ಯುತ್ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುವಂತೆ ಈ ಹಿಂದೆ ಇಂಧನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದಾಗ, ತುಂಡು ಗುತ್ತಿಗೆ ನೀಡುವಂತೆ ಆದೇಶಿಸಿದ್ದರು. ಆದರೆ, ಜೆಸ್ಕಾಂ ಅಧಿಕಾರಿಗಳು ಇಂಧನ ಇಲಾಖೆ ಕಾರ್ಯದರ್ಶಿ ಆದೇಶ ಪಾಲಿಸುತ್ತಿಲ್ಲ. ಇದರಿಂದ ಗುತ್ತಿಗೆದಾರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ಕಾಮಗಾರಿ ಮುಗಿದು ಸುಮಾರು 10 ತಿಂಗಳಾದರೂ ಹಣ ಪಾವತಿಯಾಗಿಲ್ಲ ಆದಷ್ಟು ಬೇಗನೆ ಬಿಲ್ ಪಾವತಿಸಲು ಸೂಚನೆ ನೀಡಬೇಕು. ಸರಿಯಾದ ಸಮಯಕ್ಕೆ ವಿದ್ಯುತ್ ಮಾಪಕಗಳು ಸಿಗದಿರುವ ಕಾರಣ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಮಾಪಕಗಳನ್ನು ಸರಿಯಾದ ಸಮಯಕ್ಕೆ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ವರ್ ಸಮಸ್ಯೆ ನಿವಾರಿಸಬೇಕು. ಜೆಸ್ಕಾಂ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿ 5 ವರ್ಷ ಮೇಲ್ಪಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಬೇಕು. ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಕೆಲವು ತಿಂಗಳಿನಿಂದ ತಿಳಿಸಿದರೂ ಪರಿಹರಿಸಲು ಮುಂದಾಗುತ್ತಿಲ್ಲ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.