ಬೆಳ್ತಂಗಡಿ: ಜಿಲ್ಲೆಯಲ್ಲಿ ಹೈವೇ ಮಾಫಿಯಾವೊಂದು ಕೆಲಸ ಮಾಡುತ್ತಿದೆ. ಯಾವುದೇ ಕಂಪನಿ ಕಾಮಗಾರಿ ನಡೆಸಲು ಬಂದರೂ ಅವರನ್ನು ಓಡಿಸುವುದರ ಹಿಂದೆ ಈ ಮಾಫಿಯಾ ಕೆಲಸ ಮಾಡುತ್ತಿದೆ. ಪುಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿ ಕಾಮಗಾರಿಯಲ್ಲಿಯೂ ಇದೇ ನಡೆದಿದೆ. ಈ ಮಾಫಿಯಾವನ್ನು ಜನರೆದುರಿಗೆ ತರುತ್ತೇವೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಬೆಳ್ತಂಗಡಿಯಲ್ಲಿ ಪೂಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿಯ ಆಯೋಜಿಸಿದ ಜನಾಗ್ರಹ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಕಾಮಗಾರಿಯ ಗುತ್ತಿಗೆ ಪಡೆದ ಡಿ.ಪಿ.ಜೈನ್ ಕಂಪನಿ ಯಾಕೆ ಕಾಮಗಾರಿ ಬಿಟ್ಟು ಹೋಯಿತು ಎಂಬುದನ್ನು ಜನತೆಗೆ ತಿಳಿಸಬೇಕಾಗಿದೆ. ಹೆದ್ದಾರಿ ಕಾಮಗಾರಿಯ ಅವ್ಯವಹಾರದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕ ಹರೀಶ್ ಪೂಂಜ, ಡಿ.ಪಿ.ಜೈನ್ ಕಂಪನಿಯ ಮುಂದೆ ಐದು ಕೋಟಿ ರೂ. ಬೇಡಿಕೆಯಿಟ್ಟಿರುವ ಮಾಹಿತಿ ಇದೀಗ ಲಭ್ಯವಾಗುತ್ತಿದೆ ಎಂದು ಆರೋಪಿಸಿದರು.
ಕೋಟ್ಯಂತರ ರೂ. ಹಣ ಹಾಕಿ ಕೆಲಸಮಾಡಿಸುವ ಕಂಪನಿಗೆ ಮಂಗಳೂರಿನಲ್ಲಿ ಮಳೆ ಬರುತ್ತದೆ ಎಂಬುದು ಗೊತ್ತಿಲ್ಲ ಎಂದರೆ ಅದನ್ನು ಇಲ್ಲಿನ ಜನ ನಂಬಬೇಕೆ? ಆದರೆ ಈಗಾಗಲೇ 106 ಕೋಟಿ ರೂ. ಬಿಲ್ ಅನ್ನು ಡಿಪಿ ಜೈನ್ ಕಂಪನಿಗೆ ಪಾವತಿಯಾಗಿದೆ ಇದರ ಬಗ್ಗೆಯೂ ತನಿಖೆಯಾಗಬೇಕು. ಶಾಸಕರು ಒಂದು ರೂ. ಮುಟ್ಟಿಲ್ಲ ಎಂದು ಪ್ರಮಾಣ ಮಾಡುತ್ತಿದ್ದಾರೆ. ಆದರೆ ಅವರು ಕೋಟಿ ಕೋಟಿ ರೂ. ಹಣ ದೋಚಿದ್ದಾರೆ. ಎಲ್ಲದಕ್ಕೂ ದೇವರ ಹೆಸರು ಹೇಳಿ ಪಲಾಯನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಒಂದಲ್ಲ ಒಂದು ದಿನ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇವೆ ಎಂದರು.
ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯ ಸಲಹೆಗಾರ ಮುನೀರ್ ಕಾಟಿಪಳ್ಳ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಪಪಂ ಸದಸ್ಯ ಜಗದೀಶ್ ಡಿ, ಸಿಪಿಐ ಮುಖಂಡ ಶೇಖರ ಬಿ. ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಸತೀಶ್ ಕಾಶೀಪಟ್ಣ, ಮುಖಂಡರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಉಮ್ಮರ್ ಕುಂಞಿ ಮುಸ್ಲಿಯಾರ್, ಇ.ಸುಂದರ ಗೌಡ, ವಂದನಾ ಭಂಡಾರಿ, ಶ್ರೀನಿವಾಸ ಕಿಣಿ, ಈಶ್ವರಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ಸ್ವಾಗತಿಸಿದರು. ಶ್ಯಾಮರಾಜ್ ಕಾರ್ಯಕ್ರಮ ನಿರೂಪಿಸಿದರು.