ವಿಜಯಪುರದ ಟಕ್ಕೆಯಲ್ಲಿರುವ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಿ.ಬಿ. ಚಿಕ್ಕಲಗಿ, ಪ್ರೊ.ಐ.ಎಸ್. ಮಠಪತಿ, ಡಾ.ರಾಜಕುಮಾರ ಪಿ. ಮಾಲಿಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ಗುರಿ ಸಾಧನೆಗೆ ಸತತ ಶ್ರಮವಹಿಸಿ; ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ: ಸತತ ಪ್ರಯತ್ನ, ಕಠಿಣ ಪರಿಶ್ರಮವೇ ಗುರಿ ಸಾಧನೆಯ ಮಾರ್ಗ. ಹೀಗಾಗಿ ನಿರಂತರ ಅಧ್ಯಯನ ಶೀಲರಾಗುವುದರ ಜೊತೆಗೆ ಕಠಿಣ ಪರಿಶ್ರಮ ವಹಿಸಿ ಅಂದುಕೊಂಡ ಗುರಿ ತಲುಪಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿದ್ಯಾರ್ಥಿಗಳಿಗೆ ಹೇಳಿದರು.

ನಗರದ ಟಕ್ಕೆಯಲ್ಲಿರುವ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಮುಖ್ಯಸ್ಥರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಎಲ್ಲ ವಿಷಯಗಳನ್ನು ಕರಗತ ಮಾಡಿಕೊಂಡು ಗುರಿಯಡೆಗೆ ಸಾಗಬೇಕು. ಅಭ್ಯಾಸದ ಮೂಲಕ ಸಾಣೆ ಹಿಡಿದು ಜೀವನದಲ್ಲಿ ಯಶಸ್ಸು ಹೊಂದಿ ತಾವು ಕಲಿತ ಶಾಲೆಯ ಹೆಸರು ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ನಂತರ ವಿದ್ಯಾಲಯದ ಆಡಳಿತ ಸಮಿತಿಯ ಸಭೆ ನಡೆಸಿ ವಿದ್ಯಾಲಯದ ಸಾಧನೆ ಮತ್ತು ಚಟುವಟಿಕೆಗಳ ಮಾಹಿತಿ ಪಡೆದುಕೊಂಡರು. ವಿದ್ಯಾಲಯದ ಶ್ರೇಯೋಭಿವೃದ್ಧಿಗೆ ಸಲಹೆ ಸೂಚನೆ ನೀಡಿದರು. ಶಾಲಾ ಪರಿಷತ್‌ನ ವಿದ್ಯಾರ್ಥಿ ಮುಖ್ಯಸ್ಥರಿಗೆ ಬ್ಯಾಡ್ಜ್ ವಿತರಿಸಲಾಯಿತು. ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಜುನ್ನಾ ರಾಮ್ ಸ್ವಾಗತಿಸಿದರು.

ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಸಿ.ಬಿ. ಚಿಕ್ಕಲಗಿ, ಮನಗೂಳಿ ಗ್ರೇಡ್-1 ಶಿಕ್ಷಣ ಕಾಲೇಜು ಪ್ರಾಂಶುಪಾಲ ಪ್ರೊ.ಐ.ಎಸ್. ಮಠಪತಿ, ಉಪನೋಂದಣಾಧಿಕಾರಿ (ಪರೀಕ್ಷಾ) ದೈಹಿಕ ಶಿಕ್ಷಣ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾ ವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ರಾಜಕುಮಾರ ಪಿ. ಮಾಲಿಪಾಟೀಲ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಆನಂದ ಹುಬ್ಳೀಕರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್.ಎಚ್. ರಂಗನಾಥ, ನಿವೃತ್ತ ಸಂಗೀತ ಶಿಕ್ಷಕರಾದ ಚಂದ್ರಕಾಂತ ಎನ್. ಜಾಧವ, ನಿರ್ಮಲಾ, ಭಾಗ್ಯವಂತ ಮಸೂದಿ, ಜಿಲ್ಲಾಸ್ಪತ್ರೆಯ ಆರ್‌ಎಂಒ ಡಾ. ಸುರೇಶ ಚವಾಣ್, ಅಂಚೆ ಅಧೀಕ್ಷಕ ಎಂ.ಕುಮಾರ ಸ್ವಾಮಿ ಮತ್ತಿತರರಿದ್ದಾರೆ.