ಪಾಂಡವಪುರ: ಮುಂಬರು ಜಿಲ್ಲಾ ಸಹಕಾರ ಬ್ಯಾಂಕ್ (ಡಿಸಿಸಿ) ಮತ್ತು ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ರೈಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಸದಸ್ಯತ್ವ ನೋಂದಣಿ, ಡಿಸಿಸಿ ಬ್ಯಾಂಕ್ ಮತ್ತು ಟಿಎಪಿಸಿಎಂಎಸ್ ಚುನಾವಣಾ ಸಂಬಂಧ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ ದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 35 ಸಹಕಾರ ಸಂಘಗಳಲ್ಲಿ ಜೆಡಿಎಸ್ 24 ಸಹಕಾರ ಸಂಘಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಸಂಘದ ಆಡಳಿತ ಮಂಡಳಿಗೆ ಆಯ್ಕೆ ನಡೆಇದೆ. ಜತೆಗೆ ಸೆ.28 ರಂದು ಟಿಎಪಿಸಿಎಂಎಸ್‌ಗೆ ಚುನಾವಣೆ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಕಳಂಕ ತಂದವರು ಜೈಲಿಗೆ ಹೋಗ್ತಾರೆ : ಧರ್ಮಸ್ಥಳದ ಮಂಜುನಾಥನಿಗೆ ಕಳಂಕ ಬರುವಂತೆ ವರ್ತಿಸಿದ ಕೆಲವರು ಜೈಲಿಗೆ ಹೋಗಿದ್ದಾರೆ. ಆ ಪರಿಸ್ಥಿತಿ ಕಾಂಗ್ರೆಸ್ಸಿಗರಿಗೂ ಬರಬಹುದು. ಶೇ.95ರಷ್ಟು ಹಿಂದುಗಳೇ ಇರುವ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ದೊಡ್ಡ ಅಪರಾಧ ಎಸಗಲಾಗಿದೆ. ಕಳೆದ ವರ್ಷ ನಾಗಮಂಗಲದಲ್ಲಿ ಗಣಪತಿಯನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುವ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿರ್ಮಾಣ ಮಾಡಿದರು. ಚನ್ನಪಟ್ಟಣದಿಂದ ಬಂದ ಕಿಡಿಗೇಡಿಗಳು ಗಣಪತಿಗೆ ಕಲ್ಲು ಎಸೆದು ಜಿಲ್ಲೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದನ್ನು ಮುಸ್ಲಿಂ ನಾಯಕರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಜಿಲ್ಲೆಯನ್ನು ಹೀನಾಯ ಸ್ಥಿತಿಗೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮುಡಾ ಸೈಟ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ಜೈಲಿಗೆ ಕಳುಹಿಸಬೇಕು ಎಂಬ ಹುನ್ನಾರ ನಡೆದಿತ್ತು. ಈ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ. ಮುಡಾ ಹಂಚಿಕೆ ಮಾಡಿದ್ದ ನಿವೇಶನಗಳು ಮನೆ ಕಟ್ಟಲು ಯೋಗ್ಯವಿಲ್ಲ ಎಂದು ಕೆಲವರು ಸೈಟುಗಳನ್ನು ವಾಪಸ್ ಮಾಡಿದರು. ಹೀಗಾಗಿ ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೈಟ್ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸುವ ವಿಚಾರ ಮಂಡಿಸಿದರು. ಅದನ್ನು ಸಮ್ಮತಿಸದ ನಾನು, ನಿವೇಶನ ಪಡೆಯಲು ಮತ್ತೊಮ್ಮೆ ಅರ್ಜಿ ಆಹ್ವಾನಿಸುವಂತೆ ಸಲಹೆ ನೀಡಿದೆ. ಆದರೆ, ಈ ಪ್ರಕರಣದಲ್ಲಿ ನನ್ನ ವಿರುದ್ಧ ಸಂಚು ಮಾಡಿ ಸಿಲುಕಿಸುವ ಸಲುವಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಆದರೆ, ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದರು.
ಈ ಕ್ಷೇತ್ರದ ಜನರ ಆಶೀರ್ವಾದದಿಂದ ಸಂಸದ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ 82ಸಾವಿರ ಮತ ನೀಡಲಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು 80 ವಿಧಾನಸಭಾ ಕ್ಷೇತ್ರಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಪಾಂಡವಪುರದಲ್ಲಿ ಆಯೋಜಿಸಲು ನಿಖಿಲ್ ಕುಮಾರಸ್ವಾಮಿ ಅವರ ಬಳಿ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಎಚ್.ಮಂಜುನಾಥ್, ಲಿಂಗರಾಜು (ಗುಣ), ಆರ್.ಸೋಮಶೇಖರ್, ಎಂ.ಗಿರೀಶ್, ನಂಜೇಗೌಡ, ಮಾದೇಗೌಡ ಸುಶೀಲಮ್ಮ ಇತರರು ಇದ್ದರು.