ಕೋಲಾರ: ವೇಮಗಲ್-&ಕುರಗಲ್ ಪಟ್ಟಣ ಪಂಚಾಯಿತಿಗೆ ಆ.17 ರಂದು ನಡೆಯುವ ಚುನಾವಣೆಯಲ್ಲಿ ಪಪಂನ 17 ವಾರ್ಡ್ಗಳಿಗೂ ಜೆಡಿಎಸ್ ಮತ್ತು ಬಿಜೆಪಿಯಿಂದ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಎಲ್ಲರೂ ಗೆಲುವು ಸಾಧಿಸಲಿದ್ದಾರೆ ಎಂದು ಸಂಸದ ಎಂ.ಮಲ್ಲೇಶ್ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಅವರ ನಗರದ ಗೃಹ ಕಚೇರಿಯಲ್ಲಿ ಎರಡು ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿಯಿಂದ ಪಟ್ಟಣ ಪಂಚಾಯಿತಿಗೆ ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದೇವೆ. ಎರಡು ಪಕ್ಷಗಳ ಎಲ್ಲ ಮುಖಂಡರು ಈ ಚುನಾವಣೆಯಲ್ಲಿ ಸಂಘಟಿತರಾಗಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯಿತಿಯ 17 ವಾರ್ಡ್ಗಳಲ್ಲಿ ಎಲ್ಲ ಮತದಾರರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವಂತಹ ಸೂಕ್ತವಾದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು 9 ವಾರ್ಡ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು 8 ವಾರ್ಡ್ಗಳಲ್ಲಿ ಕಣಕ್ಕೆ ಇಳಿಸಲಾಗುವುದು. ಆಯಾಯಾ ಚಿಹ್ನೆಯಡಿ ಸ್ವರ್ಧಿಸಲಿದ್ದಾರೆ. ಎರಡು ಪಕ್ಷಗಳ ಮುಖಂಡರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಗೆಲ್ಲುವ ಸಾಮರ್ಥ್ಯದ ಮಾನದಂಡದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಅಲೆ ಇದ್ದು, ಬಿಜೆಪಿ ಮತ್ತು ಜೆಡಿಎಸ್ ಪರವಾದ ಅಲೆ ಇದೆಯೆಂದು ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಸಾಬೀತಾಗಿದ್ದು, ಈ ಚುನಾವಣೆಯು ಮುಂದಿನ ಪಂಚಾಯಿತಿ ಚುನಾವಣೆಗಳ ದಿಕ್ಸೂಚಿ ಆಗಲಿದೆ ಎಂದರು.
ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾಮಪತ್ರ ಸಲ್ಲಿಕೆಗೆ ಆ.5 ರಂದು (ಮಂಗಳವಾರ) ಕೊನೆಯ ದಿನವಾಗಿದೆ. ಎನ್ಡಿಎ ಮೈತ್ರಿಯಡಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ಪಕ್ಷಗಳ ಹಿರಿಯ ಮುಖಂಡರ ಆಶೀರ್ವಾದದೊಂದಿಗೆ ಚುನಾವಣೆಯನ್ನು ನಿರ್ಭಯವಾಗಿ ಎದುರಿಸಲಿದ್ದೇವೆ. ಎರಡು ಪಕ್ಷಗಳ ಸಂಘಟನೆಯು ಸದೃಢವಾಗಿದೆ ಎಂದರು.
ಕಳೆದ 2 ವರ್ಷದಿಂದ ಕಾಂಗ್ರೆಸ್ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಡ ಜನತೆ ಮೇಲೆ ತೆರಿಗೆಗಳ ಹೊರೆ ಹೇರಿರುವುದಕ್ಕೆ ಎಲ್ಲೆಡೆ ಅಕ್ರೋಶ ವ್ಯಕ್ತವಾಗುತ್ತಿದ್ದು, ಎನ್ಡಿಎ ಅಲೆ ಸುನಾಮಿಯಂತೆ ಹರಿದು ಬರಲಿದೆ. ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಮಂಜುನಾಥ್ ಗೌಡ, ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್, ಬೆಗ್ಲಿ ಸೂರ್ಯಪ್ರಕಾಶ್, ಬಣಕನಹಳ್ಳಿ ನಟರಾಜ್, ಬಾಬು ಮೌನಿ, ವಡಗೂರು ರಾಮು, ಬಂಕ್ ಮಂಜುನಾಥ್, ಸಿ.ರಾಕೇಶ್ಗೌಡ ಇದ್ದರು.