ಆಲ್ದೂರು: ಅಂಬೇಡ್ಕರ್ ಹೇಳಿದಂತೆ ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ನಾನು ಕೂಡ ಶಾಸಕಿಯಾಗುತ್ತೇನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಇಂದು ನಾನು ಶಾಸಕಿಯಾಗಿದ್ದೇನೆ. ನಾನು ನನ್ನ ಅನುದಾನದ ಮೊದಲ ಹಣವನ್ನು ಈ ಪುತ್ಥಳಿ ನಿರ್ಮಾಣಕ್ಕೆ ನೀಡಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.
ಮಂಗಳವಾರ ಅಂಬೇಡ್ಕರ್ ವೃತ್ತದಲ್ಲಿ ಆಲ್ದೂರು ಗ್ರಾಪಂ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ನಿರ್ಮಿಸಿರುವ ಅಂಬೇಡ್ಕರ್ ಪುತ್ಥಳಿ ಉದ್ಘಾಟಿಸಿ ಮಾತನಾಡಿ, 13ವರ್ಷಗಳ ಹೋರಾಟಕ್ಕೆ ಇಂದು ಜಯ ದೊರೆತಿದೆ. ನನ್ನ ಕ್ಷೇತ್ರ ಮೀಸಲು ಕ್ಷೇತ್ರವಾದರೂ ಎಲ್ಲ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಭೇದವಿಲ್ಲದ ಬದುಕು ವೇದಕ್ಕಿಂತಲೂ ಮಿಗಿಲು ಎಂದ ನನ್ನ ಆಧ್ಯಾತ್ಮ ಗುರುಗಳು ಹೇಳಿದ ಮಾತು ಇಂದು ಸಾಕಾರವಾಗಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನೀಲಿ ಬಾವುಟ ಸಮಾನತೆಯ ಸಂಕೇತ, ಜಾತಿ ಧರ್ಮಗಳನ್ನು ಮೀರಿದ ಬಣ್ಣ. ನೆಲ್ಸನ್‌ಮಂಡೇಲಾ ಅವರು ಎಲ್ಲ ದೇಶಕ್ಕೂ ಒಂದೇ ಸೂರ್ಯ. ಆದರೆ ಭಾರತಕ್ಕೆ ಇಬ್ಬರು ಸೂರ್ಯರಿದ್ದಾರೆ. ಒಬ್ಬ ಭೂ ಮಂಡಲದ ಸೂರ್ಯ, ಮತ್ತೊಬ್ಬ ಡಾ.ಬಿ.ಆರ್. ಅಂಬೇಡ್ಕರ್ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಆಲ್ದೂರು ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕುಮಾರ ಸ್ವಾಮಿ ಮಾತನಾಡಿ,ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾನು ಇಂದು ಗ್ರಾಪಂ ಅಧ್ಯಕ್ಷೆಯಾಗಿದ್ದೇನೆ. ಅವರ ಚಿಂತನೆ, ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.
ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್, ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಅಧ್ಯಕ್ಷ ಕವೀಶ್, ಅಂಬೇಡ್ಕರ್ ಹೋರಾಟ ವೇದಿಕೆ ಗೌರವ ಅಧ್ಯಕ್ಷ ಹೊನ್ನಪ್ಪ , ಆಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಕಠಾರದಹಳ್ಳಿ, ಗ್ರಾಪಂ ಉಪಾಧ್ಯಕ್ಷ ಕೌಶಿಕ್, ಗಣಪತಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಸಿ.ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಮುದಾಬೀರ್, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಪೂರ್ಣೆಶ್ ಇದ್ದರು.