ಜಿಲ್ಲೆ

ಆಯುರ್ ಗ್ರಾಮ ನಿರ್ಮಾಣಕ್ಕೆ ಶ್ರಮಿಸಿ

ಮುಂಡರಗಿ: ಪ್ರತಿ ಗ್ರಾಮ ಹಾಗೂ ಮನೆ ಮುಂದೆ ಅಥವಾ ಹಿತ್ತಲಿನಲ್ಲಿ ಆಯುರ್ವೇದ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದರೆ ಆಯುರ್ ಗ್ರಾಮ ನಿರ್ಮಾಣ ಮಾಡಲು ಸಾಧ್ಯ ಎಂದು ಆಯುರ್ವೇದ ಕಾಲೇಜ್ ಪ್ರಾಧ್ಯಾಪಕಿ ಡಾ.ಬಾನು ಎಚ್.ಸಿ. ಹೇಳಿದರು.

ತಾಲೂಕಿನ ಯಕ್ಲಾಸಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೊ. ಸಿ.ಎನ್. ರಾವ್ ಇಕೋ ಕ್ಲಬ್ ಅಡಿಯಲ್ಲಿ ಪಟ್ಟಣದ ಎಸ್.ಬಿ.ಎಸ್. ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಯುರ್ವೇದ ಔಷಧ ಗಿಡಗಳ ಮಹತ್ವ ಕುರಿತು ಉಪನ್ಯಾಸ ಹಾಗೂ ಆರೋಗ್ಯ ತಪಾಸಣೆ ಮತ್ತು ವನ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಬಾನು ಅವರು ಆಯುರ್ವೇದ ಗಿಡಗಳು ಹಾಗೂ ಅವುಗಳಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಶಿಕ್ಷಕ ಎಂ.ಎಚ್. ಸವದತ್ತಿ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಹಿರಿಯರು ಆಯುರ್ವೇದ ಪದ್ಧತಿಯಲ್ಲಿ ಔಷಧಗಳನ್ನು ಬಳಸಿ ಅದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಡಾ.ಕಾಮರಾಜ ಎನ್. ಮಾತನಾಡಿದರು. ಶಾಲೆಯ 115 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಶಾಲಾ ಕೈತೋಟದಲ್ಲಿ 20ಕ್ಕೂ ಹೆಚ್ಚು ಆಯುರ್ವೇದ ಸಸಿಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ ಹೊಳೆಯಾಚೆ, ಶಿಕ್ಷಕ ಅನ್ನದಾನೇಶ, ದುಂಡಪ್ಪ ಕಾಗವಾಡ, ಮಂಜು ಎಚ್.ಎಚ್, ಶರಣಪ್ಪ ಮಲಭಾದಿ, ಜೋಗಿನ, ಪ್ರಶಿಕ್ಷಣಾರ್ಥಿ ರೇಣುಕಾ ಚೌಡಕಿ ಇತರರು ಇದ್ದರು. ಧನುಷ್ ಚಳಗೇರಿ ಪ್ರಾರ್ಥಿಸಿದರು. ಶಾಲಾ ಮುಖ್ಯಶಿಕ್ಷಕ ಎಂ.ಡಿ. ಮಾದರ ಸ್ವಾಗತಿಸಿದರು. ಮಂಜು ಎಚ್. ವಂದಿಸಿದರು.