ಜಿಲ್ಲೆ

ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮ

Dharwad

ಧಾರವಾಡ: ಸಮಾಜದ ಪ್ರತಿಯೊಂದು ಸಮುದಾಯಗಳ ಬಡ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮನಸೂರಿನ ಶ್ರೀ ರೇವಣಸಿದ್ಧೇಶ್ವರ ವಿದ್ಯಾಪೀಠ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನಕ ಜಯಂತಿ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಕನಕ ಪಂಚಮಿ’ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮನಸೂರು ಮಹಾಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಶಿವಾನಂದ ಮುತ್ತಣ್ಣವರ, ಬಸವರಾಜ ಮಲಕಾರಿ, ದೇವರಾಜ ಕಂಬಳಿ, ಪ್ರಭು ಹಂಚಿನಾಳ, ವಿನಾಯಕ ಕಲ್ಲೂರ, ರಾಜೇಶ್ವರಿ ಸಾಲಗಟ್ಟಿ, ಇತರರಿದ್ದರು.

ಇದೇವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಟಿ.ಬಿ. ಬಳಗಾವಿ, ಎಸ್.ಆರ್. ನವಲಿ ಹಿರೇಮಠ, ಬಿ. ನಾರಾಯಣ ರಾವ್ (ಮರಣೋತ್ತರ), ಪ್ರೊ. ಚಿಕ್ಕಣ್ಣ ಯಣ್ಣಿಕಟ್ಟಿ, ಚಿಕ್ಕರೇವಣ್ಣ ರಾಮದುರ್ಗ, ಡಿ. ವೆಂಕಟೇಶ ಮೂರ್ತಿ ಅವರಿಗೆ ‘ಕನಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಇತರರು ಪಾಲ್ಗೊಂಡಿದ್ದರು. ನಂತರ ಡೊಳ್ಳು ಕುಣಿತ, ಭರತನಾಟ್ಯ, ಸಂಗೀತ, ನಾಟಕ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.