ಜಿಲ್ಲೆ

ಕಂದಾಯ ಇಲಾಖೆಯಿಂದ ಕೆಲಸ ವಿಳಂಬ

ಪ್ರಸಿನ್ ಕೆ.ಆರ್

ಹೊಳೆನರಸೀಪುರ: ಕಂದಾಯ ಇಲಾಖೆಯಿಂದ ಆಗಬೇಕಾದ ಕೆಲಸಗಳು ಆಗಿಲ್ಲವೆಂದು ಬಹುತೇಕ ಸಾರ್ವಜನಿಕರು ಜನಸಂಪರ್ಕ ಸಭೆಯಲ್ಲಿ ದೂರಿದರು.

ತಾಲೂಕು ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರ ಸೂಚಿಸಿರುವಂತೆ ತಿಂಗಳ ಮೊದಲ ಶನಿವಾರದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಿದರು.

ತಾಲೂಕಿನ ಎಲ್ಲ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಂದ 76 ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನಗಳ ಕಾಲಾವಕಾಶ ಕೋರಲಾಗಿದೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.

ಒಟ್ಟು 76 ಅರ್ಜಿಗಳಲ್ಲಿ ಶೇ 90 ರಷ್ಟು ಅರ್ಜಿಗಳು ಕಂದಾಯ ಇಲಾಖೆಯಲ್ಲಿ ತಮ್ಮ ಕೆಲಸ ಆಗುತ್ತಿಲ್ಲ. ಕಂದಾಯ ಇಲಾಖೆಯ ಸಿಬ್ಬಂದಿ ನಮ್ಮನ್ನು ಅಲೆಸುತ್ತಿದ್ದಾರೆ ಎಂಬ ವಿಷಯದ ಕುರಿತೇ ಆಗಿದೆ. ದೂರಿನಲ್ಲಿ ಪುರಸಭೆ ವಿರುದ್ಧ ನಾಲ್ಕು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅರ್ಜಿಗಳನ್ನು ಪುರಸಭೆ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು. ಈ ನಾಲ್ಕು ಅರ್ಜಿಗಳಲ್ಲಿ ಅರ್ಜಿದಾರರು ಕೋರಿರುವ ಪ್ರಕಾರ ನಮ್ಮ ಮನೆ ಮುಂದೆ ಚರಂಡಿ ನಿರ್ಮಿಸಿಲ್ಲ ಎಂದು ಒಂದು ದೂರಾದರೆ ಮತ್ತೊಂದು ದೂರು ಚರಂಡಿ ನಿರ್ಮಿಸಿದ್ದು ಚರಂಡಿಯಲ್ಲಿ ಕಸ ಕಡ್ಡಿ ತುಂಬಿ ರೋಗ ರುಜಿನಗಳ ಸ್ಥಾನವಾಗಿದೆ ಅದನ್ನು ತೆರವುಗೊಳಿಸಿ ಅನಾರೋಗ್ಯದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.

ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆ ನೀಡಿರುವ ಅರ್ಜಿಯಲ್ಲಿ ಪಟ್ಟಣದ ಅಂಬೇಡ್ಕರ್ ನಗರ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಅಕ್ರಮ ಮದ್ಯವನ್ನು ಮನೆ ಮನೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ಆ ಬಡಾವಣೆಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಆದ್ದರಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಮನೆಗಳ ಮೇಲೆ ಅಬಕಾರಿ ಇಲಾಖೆ ಕ್ರಮಕೈಗೊಂಡು ಅಕ್ರಮ ಮದ್ಯ ಮಾರಾಟಕ್ಕೆ ಶಾಶ್ವತ ಕಡಿವಾಣ ಹಾಕುವಂತೆ ಆಗ್ರಹಪಡಿಸಿದ ಅರ್ಜಿಯನ್ನು ಅಬಕಾರಿ ಇಲಾಖೆಗೆ ಹಸ್ತಾಂತರಗೊಳಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.

ವಿದ್ಯುತ್ ಇಲಾಖೆಯ ವಿರುದ್ಧ ಎರಡು ಅರ್ಜಿಗಳು ಬಂದಿದ್ದು, ಅದರಲ್ಲಿ ತಮ್ಮ ಜಮೀನಿನಲ್ಲಿನ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿ ಕೃಷಿ ಚಟುವಟಿಕೆಗೆ ತಡೆಯುಂಟಾಗಿದೆ. ಇಲಾಖೆಯಿಂದ ತ್ವರಿತವಾಗಿ ಟ್ರಾನ್ಸ್‌ಫಾರ್ಮರ್ ಕೊಡಿಸುವಂತೆ ಬೇಡಿಕೆ ಕೋರಲಾಗಿದೆ.

ಪಟ್ಟಣದಲ್ಲಿ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಿಸುತ್ತಿರುವ ನೂತನ ಕಟ್ಟಡದ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಗುಣಮಟ್ಟ ಪರಿಶೀಲನೆಗೆ ಒಬ್ಬ ಅಧಿಕಾರಿ ಕೂಡ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವಿವರಿಸಿದರು.

ಮುಂದಿನ ತಿಂಗಳ ಮೊದಲ ಶನಿವಾರ ನಡೆಯಲಿರುವ ಜನಸಂಪರ್ಕ ಸಭೆಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು.