ಜಿಲ್ಲೆ

ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬಿರುಸಿನ ಕಾಮಗಾರಿ

Avinash R

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ‘ಅಮೃತ್ ಭಾರತ್ ನಿಲ್ದಾಣದ ಪುನರ್ ಅಭಿವೃದ್ಧಿ’ ಯೋಜನೆಯನ್ವಯ ಕಾಸರಗೋಡು ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಬಿರುಸಿನಿಂದ ಸಾಗುತ್ತಿದೆ.

ಯೋಜನೆಯನ್ವಯ ಪ್ರಮುಖ ರೈಲು ನಿಲ್ದಾಣಗಳನ್ನು ನವೀಕರಿಸುವ ಮತ್ತು ಆಧುನೀಕರಿಸುವ ಗುರಿಯೊಂದಿಗೆ ಪಾಲಕ್ಕಾಡ್ ವಿಭಾಗ ಮುಂದುವರಿಯುತ್ತಿದೆ. ಭಾರತೀಯ ರೈಲ್ವೆಯ ಸೌಲಭ್ಯಗಳನ್ನು ಸುಧಾರಿಸುವ ಮತ್ತು ಪ್ರಯಾಣಿಕರಿಗೆ ಸುಗಮ ಪ್ರಯಾಣದ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾಸರಗೋಡು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸುಸಜ್ಜಿತ ಕಟ್ಟಡ, ಆಧುನಿಕ ಸೌಕರ್ಯ ಒಳಗೊಂಡ ಕಚೇರಿ, ಶೌಚಗೃಹ ಸೇರಿದಂತೆ ಹಲವು ಕಾಮಗಾರಿ ನಡೆಯಲಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣ ಎದುರು ಭಾಗದ ಬೃಹತ್ ನೆರಳಿನ ಮರಗಳನ್ನು ಕಡಿಯಲಾಗಿದ್ದು, ಈ ಬಗ್ಗೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ರೈಲ್ವೆ ನಿಲ್ದಾಣದ ಎದುರು ಸುಸಜ್ಜಿತ ಬಸ್ ನಿಲ್ದಾಣದೊಂದಿಗೆ ಮಳೆನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥಿತ ರೀತಿಯ ಒಳಚರಂಡಿ ಕಾಮಗಾರಿಯೂ ಪ್ರಗತಿಯಲ್ಲಿದೆ.

ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಮೂಲಸೌಕರ್ಯ ಹೆಚ್ಚಿಸುವುದು, ಸುಸ್ಥಿರತೆ ಕಾಪಾಡಿಕೊಳ್ಳುವುದು, ಪ್ರಯಾಣಿಕರ ಜತೆಗೆ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವ ಬಗ್ಗೆಯೂ ಯೋಜನೆಯಲ್ಲಿ ಗಮನ ಹರಿಸಲಾಗಿದೆ. ಅಮೃತ್ ಭಾರತ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆ ಅಂಗವಾಗಿ ಪಾಲಕ್ಕಾಡ್ ವಿಭಾಗದಾದ್ಯಂತ 16 ನಿಲ್ದಾಣಗಳನ್ನು ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. - ದೇವದಾನಂ, ಸಾರ್ವಜನಿಕ ಸಂಪರ್ಕಾಧಿಕಾರಿ, ಪಾಲಕ್ಕಾಡ್ ವಿಭಾಗ