ಜಿಲ್ಲೆ

ಕೆಲಸ ಮಾಡಿ ಗೌರವ ಉಳಿಸಿಕೊಳ್ಳಿ: ಎ.ಎಸ್.ಪೊನ್ನಣ್ಣ ಸೂಚನೆ

ಆದರ್ಶ್. ಎಂ.ಕೆ.

ಮಡಿಕೇರಿ: ಭೂಮಿಪೂಜೆ ಮಾಡಿದ ನಂತರ ತಕ್ಷಣ ಕಾಮಗಾರಿ ಆರಂಭಿಸಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಂಜಿನಿಯರ್‌ಗಳು ಗೌರವವನ್ನು ಉಳಿಸಿಕೊಳ್ಳಬೇಕು. ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.


ಭಾಗಮಂಡಲದ ಮೇಲು ಸೇತುವೆಯ ಕೆಳಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಗೌರವ ಸಿಗುತ್ತದೆ. ಇಲ್ಲದಿದ್ದಲ್ಲಿ ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.


ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಬಾರದು. ಇರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು. ಈಗಾಗಲೇ ಕಾಟಕೇರಿಯಲ್ಲಿ ೧ ಮತ್ತು ಪೆರಾಜೆಯಲ್ಲಿ ಎರಡು ಕಾಮಗಾರಿ ಶೇ.೯೦ ರಷ್ಟು ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಎಂಜಿನಿಯರ್‌ನ್ನು ಅಮಾನತು ಮಾಡಲು ಮುಂದಾಗಿದ್ದೆ. ಕೆಲಸ ಮಾಡದ ಎಂಜಿನಿಯರ್‌ಗಳು ನಮಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು.


ಭಾಗಮಂಡಲ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಸುಸಜ್ಜಿತ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.


ಇದೇ ಸಂದರ್ಭ ನೂತನ ಮೇಲು ಸೇತುವೆ ಕಾಮಗಾರಿ ಮತ್ತು ತ್ರಿವೇಣಿ ಸಂಗಮದ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ಅವರು, ಕುಡಿಯುವ ನೀರಿವ ಪೂರೈಕೆ, ಗ್ರಾಮದ ಅಭಿವೃದ್ಧಿ ಮತ್ತು ಸ್ವಚ್ಛತೆ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದರು.
ಆಟೋ ಚಾಲಕರು ಮಾಲೀಕರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಭಾಗಮಂಡಲ ಶ್ರೀ ಭಗಂಡೇಶ್ವರ ತೋಟಗಾರಿಕಾ ಸಂಘಕ್ಕೆ ಭೇಟಿ ನೀಡಿದರು. ಭಾಗಮಂಡಲ ತಲಕಾವೇರಿ ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗ, ಪಂಚಾಯತಿ ಆಡಳಿತ ಮಂಡಳಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಪೊಲೀಸ್ ಠಾಣಾಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ವಿವಿಧ ವಿಚಾರಗಳ ಕುರಿತು ಮಾಹಿತಿ ಪಡೆದರು.

ಪ್ರಮುಖರಾದ ಬೇಕಲ್ ರಮಾನಾಥ್, ಕೆ.ಎ.ಇಸ್ಮಾಯಿಲ್, ನೆರವಂಡ ಉಮೇಶ್, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್, ಡಿಸಿಸಿ ಸದಸ್ಯರಾದ ಸುನಿಲ್ ಪತ್ರಾವೋ, ಹ್ಯಾರೀಸ್ ಚೆಟ್ಟಿಮಾನಿ, ಗುತ್ತಿಗೆದಾರ ಸಿ.ಎಸ್.ರಶೀದ್ ಮತ್ತಿತರರು ಹಾಜರಿದ್ದರು.