ಮೂಗೂರು: ಗೌರಿ- ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಸ್ವರ್ಣಗೌರಿ ಹಾಗೂ ಗಣೇಶ ಮೂರ್ತಿಯನ್ನು ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಮೂಗೂರಿನಲ್ಲಿ ಶನಿವಾರ ರಾತ್ರಿ ವಿಸರ್ಜನೆ ಮಾಡಲಾಯಿತು.
ವರ್ತಕರ ಆರಾಧ್ಯದೇವಿ ಎನಿಸಿದ ಗೌರಮ್ಮನ ಮೂರ್ತಿಯನ್ನು ಹಬ್ಬದ ದಿನ ಗೌರಿ ಗುಡಿಯ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇಗುಲದಲ್ಲಿ 9 ದಿನಗಳ ಕಾಲ ಪ್ರತಿ ದಿನ ವಿಶೇಷ ಪೂಜೆ, ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೂರ್ತಿ ವಿಸರ್ಜನೆ ಅಂಗವಾಗಿ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕನಕ ಶ್ರೀ ಮಹಿಳಾ ಡೋಲು ಕುಣಿತ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ಮಂಡಳಿಯ ಪದಾಧಿಕಾರಿಗಳು, ವರ್ತಕರು ಗ್ರಾಮಸ್ಥರು ಭಾಗವಹಿಸಿದ್ದರು.