ಜಿಲ್ಲೆ

ಮರದ ಸೇತುವೆಗೆ ಸಿಗಲಿದೆ ಮುಕ್ತಿ

Udupi

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡ್ತಿ ಓಣಿ ರಸ್ತೆಯಿಂದ ಪಾರಂಪಳ್ಳಿ ಸಂಪರ್ಕಿಸುವ ಹಲವು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ.

ಇಲ್ಲಿನ ಜನ ಹಲವು ವರ್ಷಗಳಿಂದ ಮರದ ಸೇತುವೆಯಲ್ಲೇ ಆಚೀಚೆ ತೆರಳಬೇಕಿತ್ತು. ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದ ಈ ಸೇತುವೆಯ ಜಾಗದಲ್ಲಿ ಶಾಶ್ವತ ಸೇತುವೆ ನಿರ್ಮಾಣದ ಕೂಗು ಆ ಭಾಗವನ್ನು ಆವರಿಸಿಕೊಂಡಿತು. ಪ್ರಸಕ್ತ ಸ್ಥಳೀಯರು, ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಸ್ಥಳೀಯ ಶಾಸಕರ ಮುತುವರ್ಜಿಯಲ್ಲಿ ನಾಲ್ಕು ಕೋಟಿ ರೂಪಾಯಿ ವೆಚ್ಚದ ಯೋಜನೆಯ ನೀಲಿನಕ್ಷೆ ಸಿದ್ಧಗೊಂಡು ಸರ್ಕಾರದ ಅನುಮೋದನೆ ದೊರೆತಿದೆ. ಇದರೊಂದಿಗೆ ಬಹುವರ್ಷಗಳ ಬೇಡಿಕೆಯಾಗಿದ್ದ ಈ ಸೇತುವೆಯ ಕಾಯಕಲ್ಪಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಮರದ ಸೇತುವೆ ಸಮಸ್ಯೆ ಕುರಿತು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ, ಆಡಳಿತ, ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಈ ಭಾಗದ ಜನ ಪಾರಂಪಳ್ಳಿ ಸಂಪರ್ಕಿಸಬೇಕಾದರೆ ಈ ಮರದ ಸೇತುವೆಯನ್ನೇ ಅವಲಂಬಿಸಬೇಕಾಗಿತ್ತು. ಸ್ಥಳೀಯರು ಹಲವು ಬಾರಿ ಜನಪ್ರತಿನಿಧಿಗಳಿಗೆ, ಉದ್ಯಮಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೂ ಛಲ ಬಿಡದೆ ಹೋರಾಟ ನಡೆಸಿದ ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ರಾಜು ಪೂಜಾರಿಯವರ ನೇತೃತ್ವದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುತುವರ್ಜಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆ ಸಿಕ್ಕಿದೆ.

ಮರದ ಸೇತುವೆಯಿಂದ ಮುಕ್ತಿಗೊಳಿಸಿ ಎಂಬುದು ಆ ಭಾಗದ ಬಹುಕಾಲದ ಬೇಡಿಕೆಯಾಗಿತ್ತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮೂಲಕ ಒತ್ತಡ ಹೇರಿ ಪ್ರಸಕ್ತ ನಾಲ್ಕು ಕೋಟಿ ರೂ. ಮಂಜೂರಾತಿ ದೊರೆತಿದೆ. ಎರಡು ಭಾಗಗಳನ್ನು ಸಂಪರ್ಕಿಸುವ ಸೇತುವೆಯಾಗಿ ಊರಿನ ಅಭಿವೃದ್ಧಿಗೆ ವೇಗ ದೊರೆಯಲಿದೆ.

ರಾಜು ಪೂಜಾರಿ ಕಾರ್ಕಡ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯರು

ತೋಡ್ಕಟ್ಟು -ಪಾರಂಪಳ್ಳಿ ಭಾಗದ ಮರದ ಸೇತುವೆಗೆ ಮುಕ್ತಿಗಾಣಿಸುವ ಪ್ರಯತ್ನ ಬಹುವರ್ಷಗಳ ಬೇಡಿಕೆಯಾಗಿತ್ತು. ಇಲ್ಲಿನ ಎರಡು ಭಾಗಗಳ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಕುರಿತು ಪಟ್ಟಣ ಪಂಚಾಯಿತಿ ಮುಖಂಡರ ಪ್ರಯತ್ನ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯರ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಿ ಜನಸಾಮಾನ್ಯರ ಬಹುದಿನಗಳ ಕನಸು ನನಸಾಗುವಂತೆ ಮಾಡಲಿ.

ಪಿ.ಜಗನ್ನಾಥ್ ಅಮೀನ್ ತೋಡ್ಕಟ್ಟು, ಸ್ಥಳೀಯ ನಿವಾಸಿ