ಜಿಲ್ಲೆ

ಸ್ತ್ರೀಯರಿಗೆ ಶಕ್ತಿ ತುಂಬಿದ ಧರ್ಮಸ್ಥಳ ಸಂಘ

Chitradurga - Desk - Suresh lamani

ಜಗಳೂರು: ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಧರ್ಮಸ್ಥಳ ಸಂಘ ಸಹಕಾರಿಯಾಗಿದೆ. ಸ್ತ್ರೀಯರಿಗೆ ಶಕ್ತಿ ತುಂಬುತ್ತಿದೆ ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹೇಳಿದರು.

ಪಟ್ಟಣದ ಪ್ರೇರಣ ಸೇವಾ ಸಂಸ್ಥೆಯ (ಚರ್ಚ್) ಆವರಣದಲ್ಲಿ ಗುರುವಾರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ. ಸಂಘಗಳಿಗೆ ನೀಡುವ ಸಾಲ ಮಕ್ಕಳ ವಿದ್ಯಾಭ್ಯಾಸಕ್ಕೆ, ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗಕ್ಕೂ ನೆರವಾಗುತ್ತಿದೆ. ಆದರೆ ಬಡ್ಡಿ ಕಟ್ಟುವ ಹಂತದಲ್ಲಿ ಮೇಲ್ವಿಚಾರಕರು ಒತ್ತಡ ಹಾಕಬಾರದು ಎಂದು ಸಲಹೆ ನೀಡಿದರು.

ಪಿಎಸ್​ಐ ಆಶಾ ಮಾತನಾಡಿ, ಇಂದಿನ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ ಹೆಣ್ಣಿನ ಮೇಲೆ ದೌರ್ಜನ್ಯ ಕಡಿಮೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ನಬಾರ್ಡ್ ಅಭಿವೃದ್ಧಿ ಪ್ರಬಂಧಕಿ ರಶ್ಮಿ ಮಾತನಾಡಿ, ಮೊದಲು ಬ್ಯಾಂಕುಗಳು ಪಟ್ಟಣಕ್ಕೆ ಸೀಮಿತ ಇದ್ದವು. ಆದರೆ ಈಗ ಧರ್ಮಸ್ಥಳ ಸಂಘ ಸೇರಿ ಹಲವು ಸಂಸ್ಥೆಗಳಿಂದ ಹಣವನ್ನು ಪಡೆದು ಸ್ವಯಂ ಉದ್ಯೋಗಗಳ ಮೂಲಕ ಆರ್ಥಿಕ ಸ್ವಾವಲಂಬನೆಗೆ ನೆರವಾಗುತ್ತಿರುವುದು ಖುಷಿಯ ವಿಚಾರ ಎಂದರು.

ಸಂಸ್ಥೆ ಯೋಜನಾ ಅಭಿವೃದ್ಧಿ ಅಧಿಕಾರಿ ಗಣೇಶ್ ಮಾತನಾಡಿದರು. ಅಖಿಲ ಕರ್ನಾಟಕ ಜಿಲ್ಲಾ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಪಿ.ಎಸ್. ಅರವಿಂದನ್, ಫಾದರ್ ಸೆಲ್ವೆಸ್ಟರ್ ಪಿರೇರಾ, ಆಲ್ ಫಾತಿಮಾ ಕಾರ್ಯದರ್ಶಿ ಶಾಹಿನಾ ಬೇಗಂ, ಲಿಂಗರಾಜು ಸೇರಿ ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು, ಸಿಬ್ಬಂದಿ ಇದ್ದರು.