ವಿಜಯಪುರ: ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ನೀಡಿದ ‘ವಿಜಯಪುರ ಬಂದ್’ನ ಬಿಸಿ ಸಾರ್ವಜನಿಕರಿಗೆ ವ್ಯಾಪಕವಾಗಿ ತಟ್ಟಿದ್ದು, ಕೋರ್ಟ್ ಕಲಾಪಕ್ಕೆಂದು ಬಂದು ವಾಹನ ಸಿಗದೇ ಅಸಹಾಯಕತೆ ತೋಡಿಕೊಂಡ ಮಹಿಳೆಯರಿಬ್ಬರಿಗೆ ಸರ್ಕಾರಿ ವಾಹನದಲ್ಲಿಯೇ ಕಳುಹಿಸಿಕೊಡುವ ಮೂಲಕ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾನವೀಯ ಕಳಕಳಿ ಮೆರೆದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಿಂತಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ಬಳಿ ಬಂದಿ ಇಬ್ಬರು ಮಹಿಳೆಯರು ತಮ್ಮ ಸಮಸ್ಯೆ ಕುರಿತು ಹೇಳಿಕೊಂಡು ಕಣ್ಣೀರಾದರು. ಕೋರ್ಟ್ ಕಲಾಪದ ಹಿನ್ನೆಲೆ ವಿಜಯಪುರಕ್ಕೆ ಬಂದಿದ್ದು, ಈ ದಿನ ವಿಚಾರಣೆಗೆ ಹಾಜರಾಗಲೇಬೇಕಿದೆ. ಸಕಾಲಕ್ಕೆ ಕೋರ್ಟ್‌ಗೆ ಹೋಗಲು ವಾಹನ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡರು.
ಈ ವೇಳೆ ಓರ್ವ ಮಹಿಳೆ ನಿತ್ರಾಣದಿಂದ ಕುಸಿದು ಕೆಳಗೆ ಕುಳಿತಿದ್ದನ್ನು ಗಮನಿಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ ಕೂಡಲೇ ತಮ್ಮದೇ ಸಿಬ್ಬಂದಿಯನ್ನು ಕರೆದು ಸರ್ಕಾರಿ ವಾಹನದಲ್ಲಿಯೇ ಕೋರ್ಟ್ ನಿಗದಿತ ಸಮಯಕ್ಕೆ ತಲುಪಿಸಲು ಸೂಚಿಸಿದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಸಿಪಿಐ ರಮೇಶ ಅವಜಿ ಮತ್ತಿತರರು ಇದ್ದರು.