ಶ್ರವಣಬೆಳಗೊಳದ ದೈವಿಕ್ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಉದ್ಘಾಟಿಸಿದರು. ಮೀನಾಕ್ಷಿ, ಶಿವಶಂಕರ್, ರವಿಕುಮಾರ್, ಚಂದನ, ಕೇಶವ ದೇವಾಂಗ, ಸದಾಶಿವ ಕುಲಾಲ್, ಕನಕ ಇದ್ದರು. 
ಜಿಲ್ಲೆ

ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಮುಖ್ಯ

ಶ್ರವಣಬೆಳಗೊಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆ, ಟೈಲರಿಂಗ್ ಹಾಗೂ ಇತರ ಕ್ಷೇತ್ರಗಳಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ಜಿಪಂ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ವತಿಯಿಂದ ಪಟ್ಟಣದ ದೀವಿಕ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಷ್ಟೇ ಸಂಕಷ್ಟ ಎದುರಿಸಿದರೂ ಕುಟುಂಬ ನಿರ್ವಹಣೆಯಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದರು.

ಕುಟುಂಬ ನಿರ್ವಹಣೆಯ ಜತೆಗೆ ಮಕ್ಕಳ ಉಜ್ವಲ ಭವಿಷ್ಯದಲ್ಲಿ ಪಾಲಕರ ಪಾತ್ರ ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ, ಕರಕುಶಲ ಉತ್ಪನ್ನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಲೋಕೇಶ್, ಆರಕ್ಷಕ ಉಪ ನಿರೀಕ್ಷಕ ಶಿವಶಂಕರ್, ವಕೀಲರಾದ ರವಿಕುಮಾರ್, ಚಂದನ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಕೇಶವ ದೇವಾಂಗ, ಯೋಜನಾಧಿಕಾರಿ ಸದಾಶಿವ ಕುಲಾಲ್, ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಕನಕ ಇತರರಿದ್ದರು.