ಮಂಡ್ಯ: ಸಾಲ ವಸೂಲಿಗಾಗಿ ಮೈಕ್ರೋ ಫೈನಾನ್ಸ್ ಹಾಗೂ ಬ್ಯಾಂಕ್ ಪ್ರತಿನಿಧಿಗಳು ಕಿರುಕುಳ ನೀಡುತ್ತಿದ್ದಾರೆಂದು ತಾಲೂಕಿನ ಹೊಳಲು ಗ್ರಾಮದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿದ ಮಹಿಳೆಯರು, ಸಾಲ ಮರು ಪಾವತಿಸಲು ಹೆಚ್ಚಿನ ಸಮಯಾವಕಾಶ ನೀಡುವಂತೆ ಆಗ್ರಹಿಸಿದರು. ಹೊಳಲು ಗ್ರಾಮದ ನೂರಾರೂ ಕುಟುಂಬಗಳು 30ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ ಕಂಪನಿ ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆದಿವೆ. ಆದರೆ ಆ ಸಾಲವನ್ನು ಮರು ಪಾವತಿ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿವೆ. ಈ ಪೈಕಿ ಹಲವರು ಮರ್ಯಾದೆಗೆ ಅಂಜಿ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಆದರೆ ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ತೀವ್ರವಾಗಿ ನೊಂದಿರುವ ಮಹಿಳೆಯರು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದರು.
ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಪ್ರತಿವಾರ ನಿಗದಿತ ದಿನದಂದು ಸಾಲದ ಕಂತುಗಳನ್ನು ಪಾವತಿ ಮಾಡಬೇಕಿದೆ. ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಲ್ಲಿ ಆ ಕಂಪನಿಗಳ ಪ್ರತಿನಿಧಿಗಳು ಮನೆಯ ಮುಂದೆಯೇ ಬಂದು ಕುಳಿತು, ಹಣ ಪಾವತಿಸುವಂತೆ ದಬಾಯಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನಮಗೆ ಮುಕ್ತಿ ನೀಡಬೇಕು, ಸಾಲ ಪಾವತಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಆಗ್ರಹಿಸಿದರು.
ಕೆಲವರಿಗೆ ಹಣದ ಅವಶ್ಯಕತೆ ಇಲ್ಲದಿದ್ದರೂ, ಅವರೇ ಮೇಲೆ ಬಿದ್ದು ಒತ್ತಡ ಹೇರಿ ಸಾಲ ನೀಡುತ್ತಿದ್ದಾರೆ. ಆನಂತರ ಪ್ರತಿವಾರ ಸಾಲದ ಕಂತನ್ನು ಕಟ್ಟುವಂತೆ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದಾರೆ. ಅನಕ್ಷರಸ್ಥ ಮಹಿಳೆಯರ ಮುಗ್ಧತೆಯನ್ನು ಬಳಸಿಕೊಂಡು ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಲಕ್ಷ್ಮೀ, ಪುಟ್ಟಚನ್ನಮ್ಮ, ಚಿಕ್ಕತಾಯಿ, ಭಾಗ್ಯಾ, ನಂಜಮ್ಮ, ಸೌಮ್ಯಾ, ನಂದಿನಿ, ರೇಣುಕಾ ಇತರರಿದ್ದರು.