ಚನ್ನರಾಯಪಟ್ಟಣ: ಸಂಪೂರ್ಣ ಮಹಿಳಾ ಕಲಾವಿದರು ಅಭಿನಯಿಸಿದ ‘ಕುರುಕ್ಷೇತ್ರ’ ನಾಟಕ ಪ್ರದರ್ಶನದಲ್ಲಿ ಮಹಿಳಾ ಶಕ್ತಿ ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನುವಾರ ಕನ್ನಡಾಂಬೆ ಕಲಾತಂಡ ಮತ್ತು ಚಾಮುಂಡೇಶ್ವರಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ಕಲಾವಿದ ಬಿ. ಪುಟ್ಟಸ್ವಾಮಯ್ಯ ವಿರಚಿತ ನಾಟಕ ಗಮನ ಸೆಳೆಯಿತು. ನಾಟಕದಲ್ಲಿ ಅಭಿನಯಿಸಿದ್ದ ಎಲ್ಲ ಕಲಾವಿದರು ಮಹಿಳೆಯರೇ ಎಂಬುದು ವಿಶೇಷ.
ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಕನ್ನಡಾಂಬೆ ಕಲಾತಂಡ ಮತ್ತು ಚಾಮುಂಡೇಶ್ವರಿ ಮಹಿಳಾ ಮಂಡಳಿಯ ಮಹಿಳೆಯರು ವಿವಿಧ ಪಾತ್ರಧಾರಿಗಳ ವೇಷ ಧರಿಸಿ ಪೌರಾಣಿಕ ನಾಟಕ ಪ್ರದರ್ಶಿಸಿದರು. ನಾಟಕ ವೀಕ್ಷಿಸಲು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಪ್ರೇಕ್ಷಕರಿಗೆ ನಾಟಕ ವೀಕ್ಷಿಸಲು ಅನುಕೂಲವಾಗುವಂತೆ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದರಿಂದ ಶಾಮಿಯಾನದ ಹೊರಭಾಗದಲ್ಲಿ ನಿಂತುಕೊಂಡೇ ಜನರು ನಾಟಕ ವೀಕ್ಷಿಸಿದರು.
ನಿರ್ದೇಶಕಿ ಸವಿತಾ ಕುಮಾರ್ ಮಾರ್ಗದರ್ಶನದಲ್ಲಿ ಬಂದೂರಿನ ಶ್ರೀ ಸಿದ್ದಲಿಂಗೇಶ್ವರ ಡ್ರಾಮಾ ಸೀನರಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಜುನಾಥ್, ಕ್ಯಾಸಿಯೋ ಕ್ಲಾರಿಯೋನೆಟ್ ಜಗದೀಶ್, ತಬಲಾ ವಾದಕ ರಮೇಶ್ ಅವರ ಹಿಮ್ಮೇಳದಲ್ಲಿ ಮೂಡಿ ಬಂದ ‘ಕುರುಕ್ಷೇತ್ರ’ ಪೌರಾಣಿಕ ನಾಟಕದಲ್ಲಿ ಶಾರದಮ್ಮ (ಸೂತ್ರಧಾರಿ), ಎಸ್.ಟಿ. ಸಾವಿತ್ರಮ್ಮ (ಒಂದನೇ ಕೃಷ್ಣ), ಹೇಮಾ (ಎರಡನೇ ಕೃಷ್ಣ), ಕುಶಲಮತಿ (ಧರ್ಮರಾಯ), ಕಾಂತಮಣಿ (ಬೀಮ), ಉಮಾ (ಅರ್ಜುನ), ಸುಜಾತಾ (ವಿಧುರ), ನಿಖಿತಾ (ಅಭಿಮನ್ಯು), ನೇತ್ರಾವತಿ(ದುರ್ಯೋಧನ), ರುಕ್ಮಿಣಿ(ದುಶ್ಯಾಸನ), ನಿಂಗಮ್ಮ (ಕರ್ಣ), ಯಶೋದಾ ಜೈನ್(ಶಕುನಿ), ಲತಾ ಗಂಗಾಧರ್ (ಧೃತರಾಷ್ಟ್ರ), ಪ್ರತಿಮಾ (ಸೈಂಧವ), ನಾಗಮಣಿ (ಭೀಷ್ಮ). ಸುಜಾತಾ (ದ್ರೋಣ), ಯಶೋದಾ (ಸುಭದ್ರೆ), ರುಕ್ಕಿಣಿ (ಶಿಖಂಡಿ), ವನಜಾಕ್ಷಿ (ಕುಂತಿ), ಸುಕನ್ಯಾ (ಸಾತ್ಯಕಿ), ಸನ್ವಿತಾ (ಬಾಲಕೃಷ್ಣ), ಸುಷ್ಮಾ (ಗಾಂಧಾರಿ, ಉತ್ತರೆ), ಹೇಮಾವತಿ (ದ್ರೌಪದಿ) ಬಾಲಕೃಷ್ಣನ ಪಾತ್ರದಲ್ಲಿ ಬಾಲಕ ಪರೀಕ್ಷಿತ್ ಅಭಿನಯಿಸಿದ್ದರು.
ಪಾತ್ರಧಾರಿಗಳ ಅಭಿನಯಕ್ಕೆ ಮನಸೋತ ಪೇಕ್ಷಕರು ಕರತಾಡನದ ಮೂಲಕ ಪ್ರೋತ್ಸಾಹಿಸುತ್ತಿದ್ದ ದೃಶ್ಯ ಕಂಡುಬಂತು. ವಿಶಿಷ್ಟ ಶೈಲಿಯ ವೇಷಭೂಷಣಗಳೊಂದಿಗೆ ರಂಗ ಪ್ರವೇಶ ಮಾಡಿದ ಮಹಿಳೆಯರು, ಪೌರಾಣಿಕ ನಾಟಕವನ್ನು ಪ್ರಸ್ತುಪಡಿಸಿದರು. ನಾಟಕ ವೀಕ್ಷಿಸಲು ಸುತ್ತಮುತ್ತ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.
ಸಮಾಜ ತಿದ್ದುವಲ್ಲಿ ನಾಟಕ ಸಹಕಾರಿ: ನಾಟಕಗಳು ಭಾರತದ ಪರಂಪರೆ ಬಿಂಬಿಸುವುದುರ ಜತೆಗೆ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಲು ಸಹಕಾರಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣಕ್ಕೆ ನಾಟಕ ಸಹಕಾರಿ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಾಗ ನಾಟಕ ತ್ತಮವಾಗಿ ಮೂಡಿ ಬರಲು ಸಾಧ್ಯ ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಾಟಕದಲ್ಲಿ ಅಭಿನಯಿಸಿದ ಹೆಗ್ಗಳಿಕೆ ತಾಲೂಕಿನ ಮಹಿಳೆಯರದ್ದಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ನಾಟಕ ಕಲಿತು ಅಭಿನಯಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಪರಿಸರವಾದಿ ಸಿ.ಎನ್.ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಪುರಸಭಾ ಸದಸ್ಯೆ ಕೆ.ಎನ್.ಬನಶಂಕರಿ, ಸದಸ್ಯರಾದ ಗಣೇಶ್, ನವೀನ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್,ಕಲಾವಿದ ಹಿರೇಬಿಳ್ತಿ ಮಂಜು, ಮಹದೇವ್ ಇದ್ದರು.