ಸೊರಬದಲ್ಲಿ ಶ್ರೀರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಚಂದ್ರಾವತಿ ವಿಲಾಸ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು. 
ಜಿಲ್ಲೆ

ಯಕ್ಷಗಾನದತ್ತ ಮಹಿಳೆಯರ ಚಿತ್ತ

Shivamogga - Desk - Praveena Kumar S

ಸೊರಬ: ಗಂಡು ಕಲೆ ಎಂದರೆ ಅದು ಯಕ್ಷಗಾನ. ಆದರೆ ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಹಳ ಜನಪ್ರಿಯವಾಗುತ್ತಿದ್ದು ಮಹಿಳೆಯರೂ ಯಕ್ಷಗಾನವನ್ನು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.
ಪಟ್ಟಣದಲ್ಲಿ ಶ್ರೀರಂಗ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ರಾತ್ರಿ ಶ್ರೀರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಚಂದ್ರಾವತಿ ವಿಲಾಸ ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಕೇವಲ ಒಂದು ತಿಂಗಳಿನಲ್ಲಿ ಯಕ್ಷಗಾನ ಕಲೆಯನ್ನು ಕಲಿತು ಜಿಲ್ಲೆ ಸೇರಿ ರಾಜ್ಯದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀ ರೇಣುಕಾಂಬಾ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಆರ್.ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ಮಲೆನಾಡು ಭಾಗದ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ವಿಶೇಷವಾಗಿ ನಾಡಿನ ಪ್ರಮುಖ ಕಲೆಯಾದ ಯಕ್ಷಗಾನಕ್ಕೆ ಸಾಕಷ್ಟು ಮಹತ್ವವಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದೀಗ ಮಹಿಳೆಯರು ಯಕ್ಷಗಾನ ಬಳಗ ಸ್ಥಾಪಿಸಿಕೊಂಡು ಯಕ್ಷಗಾನ ಪ್ರದರ್ಶನ ನೀಡುತ್ತಿರುವುದು ಮೆಚ್ಚುವಂಥಹದ್ದಾಗಿದೆ ಎಂದರು.
ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಚಂದ್ರಾವತಿ ವಿಲಾಸ ಯಕ್ಷಗಾನ ಪ್ರಸ್ತುತಪಡಿಸಿದರು. ಮುಮ್ಮೇಳದಲ್ಲಿ ಕೃಷ್ಣನಾಗಿ ವೈಷ್ಣವಿ ಮುರಳೀಧರ್ ಹಾಗೂ ಶ್ವೇತಾ ರಾಮಚಂದ್ರ, ಗೋಪಾಲಕರಾಗಿ ವೀಣಾ ಶ್ರೀಧರ್, ಶೋಭಾ ಸತ್ಯಾ, ಹರ್ಷಿತಾ ಹೆಗಡೆ ಹಾಗೂ ಸುಮಿತ್, ಚಂದ್ರಾವಳಿಯಾಗಿ ಶ್ರೀಮತಿ ಬೆನ್ನೂರ್, ರಾಧೆಯಾಗಿ ಅನುಷಾ ನಾವುಡ, ಚಂದಗೋಪನಾಗಿ ಲಕ್ಷ್ಮೀ ಮುರಳೀಧರ್ ಪಾತ್ರಗಳನ್ನು ನಿರ್ವಹಿಸಿದರು.
ಝಗಮಗಿಸುವ ವೇಷಭೂಷಣ, ಚುರುಕು ನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅಜ್ಜಿಯಾಗಿ ಜೈ ಕುಮಾರ್ ಅವರ ಹಾಸ್ಯ ಸಕಾಲಿಕವಾಗಿತ್ತು. ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಮಾರುತಿಪುರ ಅವರ ಭಾಗವತಿಕೆ, ಮಂಜುನಾಥ್ ಭಟ್ ಗುಡ್ಡೆದಿಂಬ ಅವರ ಮದ್ದಳೆವಾದನ, ಗಣೇಶ್ ಹೆಗಡೆ ಕೆರೆಕೈ ಅವರ ಚಂಡೆವಾದನ ಸಭಿಕರನ್ನು ಮೈನವಿರೇಳಿಸಿತು.
ಆಯುಷ್ ವೈದ್ಯಾಧಿಕಾರಿ ಡಾ.ಮುರಳೀಧರ್, ಬಯಲಾಟ ಹಿರಿಯ ಕಲಾವಿದ ಎಚ್.ಕೆ.ಯಶವಂತಪ್ಪ ಚಂದ್ರಗುತ್ತಿ, ಹಿರಿಯ ನಾಗರಿಕ ಕೆ.ಪ್ರಭಾಕರ್ ರಾಯ್ಕರ್, ಕಲಾ ಪೋಷಕ ದಿವಾಕರ್ ಭಾವೆ, ದಿನಕರ ಭಟ್ ಭಾವೆ, ಶ್ರೀಧರ್ ನೆಮ್ಮದಿ, ಹನುಮಂತಪ್ಪ ಮಾಸ್ತರ್, ನಾಗರಾಜ ಗುತ್ತಿ, ಹರ್ಷಾ ಹೆಗಡೆ, ಜೆ.ಎಸ್.ಚಿದಾನಂದಗೌಡ ಇತರರಿದ್ದರು.