ಜಿಲ್ಲೆ

ಮಹಿಳಾ ಸಮಾನತೆ, ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ

ಮಂಜುನಾಥ.ಕೆ

ಬೆಂಗಳೂರು: ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ನಮ ಇಲಾಖೆಯಲ್ಲಿ ಅಕ್ಷರಶಃ ಕಾಣಬಹುದಾಗಿದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿ, ಪುರುಷ ಸಿಬ್ಬಂದಿಯಷ್ಟೇ ಹೆಚ್ಚಿನ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸಿ, ವಾಹನಗಳ ಪುನಃಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ, ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ. ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ , ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾತನಾಡಿ, ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಅಭಿವೃದ್ದಿ ಹೊಂದುತ್ತಿರುವುದು ಸ್ವಾಗತಾರ್ಹ. ತಮ್ಮ ತಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಬ್ಯಾಸವನ್ನು ದೊರಕಿಸಿಕೊಟ್ಟು, ಮಕ್ಕಳನ್ನು ಸಬಲರನ್ನಾಗಿ ಮಾಡಬೇಕು. ಶಿಕ್ಷಣ ಒಂದೇ ಮಹಿಳೆಯರನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯಲು ಸಾಧನವಾಗಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅಂಗನವಾಡಿ ಆವರಣದಲ್ಲಿ ಬಾವಿ ತೆಗೆದ ಗೌರಿ ನಾಯಕ್ ಅವರ ಸಮಾಜಮುಖಿ ಸೇವೆಯನ್ನು ಪ್ರಶಂಸಿದ ಸಾರಿಗೆ ಸಚಿವರು, ಇದೇ ರೀತಿಯಲ್ಲಿ ಅವರು ಕಾರ್ಯವನ್ನು ಮುಂದುವರಿಸಲು ದೇವರು ಶಕ್ತಿ ಮತ್ತು ಆಯಸ್ಸನ್ನು ನೀಡಲಿ ಎಂದು ಹಾರೈಸಿದರು. ಅಂಗನವಾಡಿ ಆವರಣದಲ್ಲಿ ಅವರು ತೆರೆದಿರುವ ಬಾವಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುತ್ತಲು ಕಟ್ಟೆಯನ್ನು ನಿರ್ಮಿಸುವ ಸಲುವಾಗಿ ನಿಗಮದ ವತಿಯಿಂದ ೧ ಲಕ್ಷ ರೂ. ಅನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದರು.