ಜಿಲ್ಲೆ

ಬಚಗಾಂವ್‌ನಲ್ಲಿ ಸ್ತ್ರೀ ಚೇತನ ಅಭಿಯಾನ

ಶಿರಸಿ: ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಜಾಗೃತಿ ಮೂಡಿಸೋಣ ಎಂದು ನರೇಗಾ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ ಅವರು ಕೂಲಿಕಾರರಿಗೆ ಸಲಹೆ ನೀಡಿದರು.

ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚಗಾಂವ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸ್ತ್ರೀ ಚೇತನ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ 370 ರೂ. ಕೂಲಿಯೊಂದಿಗೆ ಕುಟುಂಬವೊಂದಕ್ಕೆ 100 ದಿನಗಳ ಕೆಲಸ ಖಾತ್ರಿ ಅಂದರೆ ವಾರ್ಷಿಕವಾಗಿ 37ಸಾವಿರ ರೂ. ಗಳನ್ನು ನೀಡಲಾಗುತ್ತದೆ. ಹಾಗೂ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದಕೊಟ್ಟಿಗೆ, ಕುರಿಶೆಡ್, ಕೋಳಿಶೆಡ್‌ನಂತಹ ಕಾಮಗಾರಿಗಳು ಹಾಗೂ ತೋಟಗಾರಿಕಾ ಬೆಳೆಗಳಾದ ಅಡಕೆ, ಮಾವು, ಸಿಬೆ ಹಾಗೂ ಇನ್ನಿತರ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದಾಗಿದೆ ಎಂದರು.

65 ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸದಲ್ಲಿ ರಿಯಾಯಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಯೋಜನೆಯಡಿ ಇರುವ ಸೌಲಭ್ಯಗಳಾದ ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲೇಶ್ ಮಡಿವಾಳ, ಪಿಡಿಒ ಪ್ರೀತಿ ಶೆಟ್ಟಿ, ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಇತರರಿದ್ದರು.