ಜಿಲ್ಲೆ

ವಿಭಿನ್ನವಾಗಿರಲಿದೆ ಮಹಿಳಾ ದಸರಾ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೋಟ ಸ್ಪರ್ಧೆ… ರಂಗೋಲಿ ಚಿತ್ತಾರ, ಒಲೆರಹಿತ ಅಡುಗೆ ಸ್ಪರ್ಧೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮ… ಅಷ್ಟೇ ಅಲ್ಲ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವಂತಹ ಹತ್ತಾರು ಕಾರ್ಯಕ್ರಮ…

ಇದು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮಹಿಳಾ ದಸರಾದ ನಿರೀಕ್ಷಿತ ಕಾರ್ಯಕ್ರಮಗಳ ಪಟ್ಟಿ. ಮಹಿಳೆಯರು ದಸರಾಕ್ಕೆ ರಂಗು ನೀಡಲು ಮುಂದಾಗಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮಹಿಳಾ ದಸರಾವನ್ನು ಪ್ರಸಕ್ತ ವರ್ಷ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಮುಂದಾಗಿದೆ. ಈ ಪೈಕಿ ಐದರಿಂದ ಆರು ದಿನಗಳ ಕಾಲ ಮಹಿಳಾ ದಸರಾ ಸಂಭ್ರಮ ಇರಲಿದೆ.
ಈ ಸಂಬಂಧ ಮಹಿಳೆಯರಿಗೆ ಅನುಕೂಲವಾಗುವ ಹಾಗೂ ಮಕ್ಕಳು, ಮಹಿಳೆಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮನರಂಜನೆ ನೀಡುವಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಆಶಯದೊಂದಿಗೆ ಮಹಿಳಾ ಹಾಗೂ ಮಕ್ಕಳ ದಸರಾ ಆಯೋಜಿಸಲು ತೀರ್ಮಾನಿಸಲಾಗಿದೆ. ವಿವಿಧ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಜೋಶ್ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ವಿಶೇಷವಾಗಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಿಗೂ ಈ ಬಾರಿ ನಾನಾ ಸ್ಪರ್ಧೆ ಆಯೋಜಿಸಲು ಚಿಂತಿಸಲಾಗಿದೆ. ಜತೆಗೆ ಅಂಗವಿಕಲ ಮಹಿಳೆಯರು ಹಾಗೂ ಪುರುಷರಿಗೂ ನಾನಾ ಮನರಂಜನ ಸ್ಪರ್ಧೆ ಆಯೋಜಿಸಲು ಚಿಂತಿಸಿರುವುದು ವಿಶೇಷವಾಗಿದೆ.

ಮುಖ್ಯವಾಗಿ ನಾನಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮಹಿಳೆಯರನ್ನು ಕರೆಸುವ ಮೂಲಕ ಎಲ್ಲ ಮಹಿಳೆಯರಿಗೆ ಪ್ರೇರಣೆಯಾಗುವಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಚಿಂತಿಸಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ಮೈಸೂರು ಮೂಲದ ಮಹಿಳೆಯರನ್ನು ಆಹ್ವಾನಿಸಿ ಸನ್ಮಾನಿಸುವ ಜತೆಗೆ ಅವರ ಸಾಧನೆಯನ್ನು ಎಲ್ಲ ಮಹಿಳೆಯರಿಗೆ ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಸಮಿತಿ ಮುಂದಾಗಿದೆ.

ಜೆ.ಕೆ.ಮೈದಾನದಲ್ಲಿ ಆಯೋಜನೆ:

ಅಕ್ಟೋಬರ್ ಮೊದಲ ಹಾಗೂ ಎರಡನೇ ವಾರದ ಮಧ್ಯೆ ಐದರಿಂದ ಆರು ದಿನಗಳ ಕಾಲ ಮಹಿಳಾ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚಿಸಲಾಗಿದೆ. ಈ ವೇಳೆ ಮಹಿಳೆಯರಿಗಾಗಿ ನಾನಾ ಕಾರ್ಯಕ್ರಮ ಜರುಗಲಿವೆ. ಜೆ.ಕೆ.ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಹಿಳೆಯರಿಗೆ ನಾನಾ ಸ್ಪರ್ಧೆಗಳು ಜರುಗಲಿವೆ.

ಮೊದಲ ದಿನ ರಂಗೋಲಿ ಸ್ಪರ್ಧೆ ಆಯೋಜಿಸಲು ಚಿಂತಿಸಲಾಗಿದ್ದು, ಎಲ್ಲರನ್ನು ಆಕರ್ಷಿಸಲಿದೆ. ಉದ್ಘಾಟನೆಗೂ ಮುನ್ನ ರಂಗೋಲಿ ಸ್ಪರ್ಧೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಮಹಿಳೆಯರಿಗೆ ಆಕರ್ಷಕ ಬಹುಮಾನವೂ ಇರಲಿದೆ. ಮೊದಲ ದಿನ ಶಾಲಾ ಮಕ್ಕಳಿಂದ ಮೆರವಣಿಗೆ ನಡೆಯಲಿದೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣವಾಗಲಿದೆ.

ಒಂದು ದಿನ ಮಹಿಳೆಯರಿಗೆ ಪದಗಳೊಂದಿಗೆ ರಾಗಿ ಬೀಸುವ ಸ್ಪರ್ಧೆ ಆಯೋಜಿಸಲು ಚಿಂತಿಸಲಾಗಿದ್ದು, ಆಸಕ್ತರು ರಾಗಿ ಬೀಸುವ ಕಲ್ಲನ್ನು ತಾವೇ ತಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಎಲ್ಲ ಮಹಿಳೆಯರು ಜಾನಪದ ಸೇರಿದಂತೆ ನಾನಾ ಪದಗಳನ್ನು ಹಾಡುತ್ತ್ತಾ ರಾಗಿ ಬೀಸಬೇಕಿದೆ. ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ ಇರಲಿದೆ. ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ನಾನಾ ಸ್ಪರ್ಧೆ ಆಯೋಜಿಸಲಾಗಿದೆ. ಲೆಮೆನ್ ಆ್ಯಂಡ್ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ಸಾಕಷ್ಟು ಆಟೋಟ ಆಯೋಜಿಸಲಾಗುವುದು. ಮಂಗಳಮುಖಿಯ(ಲಿಂಗತ್ವ ಅಲ್ಪಸಂಖ್ಯಾತ)ರಿಂದ ನೃತ್ಯ ಮತ್ತು ನಾಟಕ ಪ್ರದರ್ಶನ ಆಯೋಜನೆಗೂ ಚಿಂತಿಸಲಾಗಿದೆ.

ಜತೆಗೆ ಅಂಗವಿಕಲರು, ಹಿರಿಯ ನಾಗರಿಕರು, ಕಾರ್ಯಕರ್ತೆಯರು, ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನಾನಾ ಆಟೋಟ ಆಯೋಜಿಸಲು ಚಿಂತಿಸಲಾಗಿದೆ. ವಿಶೇಷವಾಗಿ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ನಡೆಯುವ ಸ್ಪರ್ಧೆ, ಲೆಮೆನ್ ಆ್ಯಂಡ್ ಸ್ಪೂನ್, ಬಲೂನ್ ಊದುವ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಕೇಶವಿನ್ಯಾಸ ಸ್ಪರ್ಧೆ, ಜಾನಪದ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ.

ವಸ್ತು ಪ್ರದರ್ಶನ:

ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜೆ.ಕೆ.ಮೈದಾನದಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲು ಚಿಂತಿಸಲಾಗಿದೆ. ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಾವು ತಯಾರಿಸುವ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜತೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು.

ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾವನ್ನು ವಿಶೇಷ ರೀತಿ ಆಯೋಜಿಸಲು ಚಿಂತಿಸಲಾಗಿದೆ. ಮುಖ್ಯವಾಗಿ ಮಹಿಳಾ ಸಬಲೀಕರಣದ ಆಶಯದೊಂದಿಗೆ ಮಹಿಳಾ ದಸರಾ ಆಯೋಜಿಸಲು ತೀರ್ಮಾನಿಸಲಾಗಿದೆ. ಮಹಿಳೆಯರಿಗೆ ಆಟೋಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಂಜುನಾಥ್, ಕಾರ್ಯಾಧ್ಯಕ್ಷ,ಮಹಿಳಾ ಮತ್ತು ಮಕ್ಕಳಾ ದಸರಾ ಉಪ ಸಮಿತಿ