ಗೋಣಿಕೊಪ್ಪ: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ನಾಲ್ಕನೇ ದಿನದ ಕಾರ್ಯಕ್ರಮದ ಅಂಗವಾಗಿ ಮಹಿಳಾ ದಸರಾ ಕಾರ್ಯಕ್ರಮವು ದಸರಾ ವೇದಿಕೆಯ ಆವರಣದಲ್ಲಿ ಜರುಗಿತು. ಈ ಬಾರಿ ಮಹಿಳಾ ದಸರಾ ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷೆ ಎಂ.ಮಂಜುಳಾ ವಹಿಸಿದ್ದರು.
ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಮಹಿಳಾ ದಸರಾಗೆ ಚಾಲನೆ ನೀಡಿದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನೆಟ್‌ಬಾಲ್, ಹಗ್ಗ ಜಗ್ಗಾಟ, ಫ್ಯಾಷನ್ ಶೋ, ನೃತ್ಯ ಪ್ರದರ್ಶನ, ಮೋಜಿನ ಸ್ಪರ್ಧೆ, ಸಾಮೂಹಿಕ ನೃತ್ಯ ಹಾಗೂ ಜಾನಪದ ಗೀತೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಸಮಾಜದ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ರಾಜ್ಯ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ವಿಜೇತರು, ದಾನಿ ಕೈಬುಲಿರ ಪಾರ್ವತಿ ಬೋಪಯ್ಯ, ಶಿಕ್ಷಕಿ ತಿ ವಾಮನ ಟಿ.ಕೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತ ರೈ, ಶಿಕ್ಷಕಿ ಕವಿತಾ ಕೆ.ಡಿ, ಶಿಕ್ಷಕಿ ಜಾನ್ಸಿ ಹಾಗೂ ವಿರಾಜಪೇಟೆಯ ಉದ್ಯಮಿ ಪೂಜಾ ಸಜೇಶ್, ಬರಹಗಾರರಾದ ಕೆ.ಟಿ.ವಾತ್ಸಲ್ಯ, ಅಂಗನವಾಡಿ ಕಾರ್ಯಕರ್ತೆಯಾದ ಲತಾ ಇವರುಗಳನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮಹಿಳಾ ದಸರಾದ ಅಧ್ಯಕ್ಷರಾದ ಮಂಜುಳಾ ಹಾಗೂ ಉಪಾಧ್ಯಕ್ಷರಾದ ಕುಸುಮಾ ಜೋಯಪ್ಪ, ಧನಲಕ್ಷ್ಮೀ, ರಜನಿ, ಕಾರ್ಯದರ್ಶಿ ವರಲಕ್ಷ್ಮೀ ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷ ನಾಯಿಂದರ ಶಿವಾಜಿ, ಖಜಾಂಚಿ ಚೆಪ್ಪುಡಿರ ಧ್ಯಾನ್, ಸಂಯೋಜಕರಾದ ಚಂದನ್ ಕಾಮತ್ ಉಪಸ್ಥಿತರಿದ್ದರು. ಮುಂಜಾನೆಯಿಂದಲೂ ಸಂಜೆವರೆಗೂ ತಮ್ಮ ದೈನಂದಿನ ಕೆಲಸವನ್ನು ಬದಿಗೊತ್ತಿದ ಮಹಿಳೆಯರು ಕ್ರೀಡಾ ಕೂಟ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಸಿದರು.
ಕ್ರೀಡಾ ವಿಜೇತರು : ಹಗ್ಗ ಜಗ್ಗಾಟ (7 ಜನರ ತಂಡ): ಮೊದಲನೇ ಬಹುಮಾನ ಮಾದೇಶ ಸ್ಪೋರ್ಟ್ಸ್ ಕ್ಲಬ್, ಬಲಮುರಿ
ಎರಡನೇ ಬಹುಮಾನ ಮಾರಮ್ಮ ತಂಡ, ಕೋತೂರು. ರಂಗೋಲಿ ಸ್ಪರ್ಧೆ: ಮೊದಲನೇ ಬಹುಮಾನ ಇ.ಆರ್. ಸುಜಾತ, ದ್ವಿತೀಯ ಬಹುಮಾನ ಸುಮಿತ್ರಾ, ತೃತೀಯ ಬಹುಮಾನ ವಿವಿ ರಜನಿ ಮತ್ತು ಆರ್.ಲತಾ. ಬಾಲ್ ಇನ್ ದ ಬಾಸ್ಕೆಟ್: ಮೊದಲ ಬಹುಮಾನ ಆಶಿಕಾ, ದ್ವಿತೀಯ ಬಹುಮಾನ ಮಾಲ. ಕೈಕಟ್ಟಿ ಸೇಬನ್ನು ತಿನ್ನುವ ಸ್ಪರ್ಧೆ: ಮೊದಲನೇ ಬಹುಮಾನ ಮೊನಿಕಾ ಲಿಖಿತ್, ದ್ವಿತೀಯ ಬಹುಮಾನ -ಶಶಿ. ಸಾಂಸ್ಕೃತಿಕ ಸ್ಪರ್ಧೆ: ಜಾನಪದ ಗೀತೆಯಲ್ಲಿ ವಿರಾಜಪೇಟೆಯ ವಿ ಲವಿಂಗ್ ಫ್ರೆಂಡ್ಸ್ ತಂಡ ಮೊದಲ ಬಹುಮಾನ, ಪೊನ್ನಂಪೇಟೆಯ ನಿಸರ್ಗ ಕಲಾ ತಂಡ ಎರಡನೇ ಬಹುಮಾನ ಹಾಗೂ ಇಂಚರ ಕಲಾ ತಂಡ ತೃತೀಯ ಬಹುಮಾನ ಪಡೆದವು.
ಸಾಮೂಹಿಕ ನೃತ್ಯ ( 8 ಜನಕ್ಕೆ ಮೇಲ್ಪಟ್ಟ ತಂಡ): ಮೊದಲನೇ ಬಹುಮಾನ ಅನುಭಂದ ನೃತ್ಯ ತಂಡ, ಎರಡನೇ ಬಹುಮಾನ ನಿಸರ್ಗ ಕಲಾ ತಂಡ, ತೃತೀಯ ಬಹುಮಾನ ಟೀಂ ಸ್ಪೂರ್ತಿ. ಫ್ಯಾಶನ್ ಶೋ ( ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ರಶ್ಮಿ ರಾಜಾ (ಪ್ರಥಮ), ಪಲ್ಲವಿ ಸತೀಶ್ (ದ್ವಿತೀಯ), ಆಶಿಕಾ (ತೃತೀಯ ) ಬಹುಮಾನ ಪಡೆದುಕೊಂಡರು.