ಜಿಲ್ಲೆ

ಪ್ರತಿದಿನವೂ ಸಿಗಲಿ ಹೆಣ್ಣಿಗೆ ಗೌರವ: ಜಿಲ್ಲಾಧಿಕಾರಿ

ಉಡುಪಿ: ಪ್ರತಿದಿನವೂ ಮಹಿಳೆಗೆ ಸಮಾಜದಲ್ಲಿ ಗೌರವ ಲಭಿಸಬೇಕು. ಹೆತ್ತಮ್ಮನಿಗೆ ಮೊದಲು ಎಲ್ಲರೂ ಗೌರವ ನೀಡಬೇಕು. ರಾಷ್ಟ್ರಕವಿ ಕುವೆಂಪು ಆಶಯದಂತೆ ಬೆಂಕಿಯಲ್ಲಿ ಸುಟ್ಟಿಕೊಳ್ಳುವಂತಹ, ಮಳೆಗೆ ನೆನೆಯುವಂತಹ, ಬಿರುಗಾಳಿಗೆ ಮೈಯೊಡ್ಡುವ ಆಕೆಯ ಪ್ರತಿ ಶ್ರಮಕ್ಕೂ ಗೌರವ ಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು.

ಉಡುಪಿಯ ಡಾ. ಜಿ. ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಮಹಿಳಾ ಸಂಘ, ಸಮಾನ ಮನಸ್ಕ ಕನ್ನಡಿಗರ ವೇದಿಕೆ ಉಡುಪಿ ಮತ್ತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬದಲಾಗುತ್ತಿದೆ ಸಮಾಜ:
ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್​. ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಮೆಟ್ಟದ ಕ್ಷೇತ್ರವಿಲ್ಲ ಎಂಬ ರೀತಿಯಲ್ಲಿ ಹೆಣ್ಣು ಸಾಧನೆ ಮಾಡುತ್ತಿದ್ದಾಳೆ. ಇತಿಹಾಸ ನೋಡಿದಾಗ ಮಹಿಳೆ ಎದುರಿಸಿದ್ದ ಸಮಸ್ಯೆ ತಿಳಿದುಬರುತ್ತದೆ. ಇತ್ತೀಚೆಗೆ ಸಮಾಜದಲ್ಲಿ ಹಾಗೂ ಮನೆಯೊಳಗಿನ ವಾತಾವರಣ ಬದಲಾಗುತ್ತಿದೆ. ಆದರೆ, ಹೆಣ್ಣು ಜನಿಸಿದರೆ ಹೀನಾಯವಾಗಿ ವರ್ತಿಸುವ ಪರಿಸ್ಥಿತಿ ಇಂದಿಗೂ ದೇಶದ ವಿವಿಧೆಡೆ ಇದೆ. ಶಿಕ್ಷಣ ಹೊಂದಿದರೆ ಮಾತ್ರ ಮಹಿಳೆಗೆ ಎಲ್ಲ ಸಮಸ್ಯೆ ಎದುರಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್​ ಶೆಟ್ಟಿ ಎಸ್​. ಮಾತನಾಡಿ, ವಿಜಯವಾಣಿ ಆಯೋಜಿಸಿರುವ ಈ ಕಾರ್ಯಕ್ರಮ ಔಚಿತ್ಯ ಪೂರ್ಣವಾಗಿದೆ. ವಿಧುರನ ಮನೆಗೆ ಕೃಷ್ಣ ಬಂದ ಹಾಗೆ, ಶಬರಿಯ ಮನೆಗೆ ಶ್ರೀರಾಮ ಬಂದ ಹಾಗೆ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿನಿಯರು ಇರುವ ಜಿ.ಶಂಕರ್​ ಕಾಲೇಜಿನಲ್ಲಿ ವಿಜಯವಾಣಿ ಮಹಿಳಾ ದಿನಾಚರಣೆ ಆಚರಿಸಿರುವುದು ಮಾದರಿಯಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶರ್ಮಿಳಾ ಎಸ್​., ಜಿಲ್ಲಾ ಸರ್ಜನ್​ ಡಾ. ವೀಣಾ, ಸಮಾನ ಮನಸ್ಕ ಕನ್ನಡಿಗರ ವೇದಿಕೆ ಉಡುಪಿಯ ಅಧ್ಯಕ್ಷ ಕೆ. ಶ್ರೀನಿವಾಸ್​ ರಾವ್​ ಉಪಸ್ಥಿತರಿದ್ದರು. ವಿಜಯವಾಣಿ ಮಂಗಳೂರು ಜಾಹೀರಾತು ವಿಭಾಗದ ಮುಖ್ಯಸ್ಥ ನವೀನ್​ ಬಿ.ಆರ್​., ಉಡುಪಿ ವಿಭಾಗದ ಸಚಿನ್​ ದೇವಾಡಿಗ, ಉಡುಪಿ ಜಿಲ್ಲಾ ಪ್ರಸಾರಾಂಗ ವಿಭಾಗದ ನವೀನ್​, ಕೀರ್ತನ್, ಹಿರಿಯ ವರದಿಗಾರ ಪ್ರಶಾಂತ ಭಾಗ್ವತ, ಕಾಲೇಜಿನ ಉಪನ್ಯಾಸಕರಾದ ಸಚ್ಚೇಂದ್ರ, ಡಾ. ರಾಜೇಂದ್ರ, ವಿದ್ಯಾ ಡಿ., ಸುಜಾತಾ, ಶ್ರೀಮತಿ ಅಡಿಗ ಪಾಲ್ಗೊಂಡಿದ್ದರು. ಕಾಲೇಜಿನ ವಿದ್ಯಾರ್ಥಿನಿ ಶ್ರೀಪ್ರದಾ ಪ್ರಾರ್ಥಿಸಿದರು. ಹಿರಿಯ ವರದಿಗಾರ ಗೋಪಾಲಕೃಷ್ಣ ಪಾದೂರು ಸ್ವಾಗತಿಸಿದರು. ಮಹಿಳಾ ಸಂಘದ ಸಂಚಾಲಕಿ ಜಯಮಂಗಳಾ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.