ಜಿಲ್ಲೆ

ಮಹಿಳಾಸ್ನೇಹಿ ಗ್ರಾಪಂಗೆ ಗ್ರಾಮಸ್ಥರ ಸಹಕಾರ ಅಗತ್ಯ...

ಅಧ್ಯಕ್ಷ ಕೇಶವ್​ ಕೋಟ್ಯಾನ್​ ಆಶಯ

ಮಹಿಳಾ ದಿನಾಚರಣೆ, ಆರೋಗ್ಯ ಶಿಬಿರ

ವಿಜಯವಾಣಿ ಸುದ್ದಿಜಾಲ ಉಡುಪಿ

ಆರೋಗ್ಯ, ಸ್ವಚ್ಛತೆಯ ರಕ್ಷಣೆ ಹಾಗೂ ಕಾಳಜಿಯೊಂದಿಗೆ ಅವಕಾಶಗಳ ಸದುಪಯೋಗದಿಂದ ಮಹಿಳೆ ಮುಖ್ಯವಾಹಿನಿಗೆ ಬರಬೇಕು. ಸ್ಥಳೀಯ ಆಡಳಿತದಲ್ಲಿ ಆಯೋಜಿಸುವ ನಾಯಕತ್ವದ ಕಾರ್ಯಕ್ರಮಗಳಲ್ಲಿ ಹದಿಹರೆಯದ ಯುವತಿಯರು ಪಾಲ್ಗೊಳ್ಳುವಂತಾಗಬೇಕು. ತನ್ಮೂಲಕ ಗ್ರಾಮ ಪಂಚಾಯಿತಿಯನ್ನು ಮಹಿಳಾ ಸ್ನೇಹಿಯಾಗಿ ಪರಿವರ್ತಿಸಲು ಗ್ರಾಮಸ್ಥರ ಸಹಕಾರ ಬೇಕು ಎಂದು 80 ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ್​ ಕೋಟ್ಯಾನ್​ ಆಶಯ ವ್ಯಕ್ತಪಡಿಸಿದರು.

ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಪಂನ ಸಭಾಭವನದಲ್ಲಿ ಪಡಿ ಸಂಸ್ಥೆ ಮಂಗಳೂರು ಹಾಗೂ ಪ್ರಸನ್ನ ಕಾಲೇಜ್​ ಆಫ್​ ಹೆಲ್ತ್​ ಸೈನ್ಸ್​ ಮಣಿಪಾಲ ಆಶ್ರಯದಲ್ಲಿ ಮಾ.8ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಬಡಗಬೆಟ್ಟು ಗ್ರಾಪಂ ಆಯ್ಕೆ

ಪಿಡಿಒ ಅಶೋಕ್​ ಮಾತನಾಡಿ, ದೇಶದ 770 ಗ್ರಾಪಂಗಳ ಪೈಕಿ ಬಡಗಬೆಟ್ಟು ಗ್ರಾಪಂ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಪಂ ಆಗಿ ಆಯ್ಕೆಯಾಗಿದೆ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ರೂಪಾ ನಾಯಕ್​ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಪ್ರಸನ್ನ ಕಾಲೇಜ್​ ಆಫ್​ ಹೆಲ್ತ್​ ಸೈನ್ಸ್​ನ ಉಪನ್ಯಾಸಕಿ ಐಡಾ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಪಡಿ ಸಂಸ್ಥೆಯ ಸಿಇಒ ರೆನ್ನಿ ಡಿಸೋಜಾ ಮತ್ತು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ನಾಯ್ಕ ಮಾತನಾಡಿದರು.

ಗ್ರಾಮದ ಎಸ್​ಎಚ್​ಜಿ ಗ್ರೂಪ್​ ಸದಸ್ಯೆ, ನೀರು ನಿರ್ವಾಹಕಿ, ಗ್ರಾಮದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯನ್ನೂ ಸನ್ಮಾನಿಸಲಾಯಿತು. ಮಹಿಳಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೆಎಂಸಿ ಮಣಿಪಾಲದ ದಂತ ವೈದ್ಯಕೀಯ ವಿಭಾಗದ ತಜ್ಞರಿಂದ ಮಹಿಳೆಯರಿಗಾಗಿ ದಂತ ಚಿಕಿತ್ಸೆಯ ಉಚಿತ ಶಿಬಿರ ಆಯೋಜಿಸಲಾಗಿತ್ತು.

ಮಹಿಳಾ ಮತ್ತು ಹೆಣ್ಣು ಮಕ್ಕಳ ಗ್ರಾಮ ಪಂಚಾಯಿತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.

ಗ್ರಾಪಂ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಚಿನ್ಮಯ್​ ಹಾಗೂ ಕೃಷ್ಣ ಪ್ರಸಾದ್​ ನಿರೂಪಿಸಿದರು. ಅಂಜಲಿ ವಂದಿಸಿದರು.