ಜಿಲ್ಲೆ

VIDEO| ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನಟ ಪುನೀತ್​ ಹೇಳಿದ್ದೇನು ಕೇಳಿ!

malli

ಬೆಂಗಳೂರು: ಅದೊಂದು ಮಾರುಕಟ್ಟೆ ಪ್ರದೇಶ, ಜನ ಜಂಗುಳಿ ಇರುವ ಜಾಗ. ಬಲೂನ್​ ಮಾರುವವ, ಎಳನೀರು ಮಾರುವವ, ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ಅಜ್ಜಿ, ಅಂಗಡಿಗೆ ಬಣ್ಣ ಹಚ್ಚುವ ಕೆಲಸಗಾರ... ಹೀಗೆ ನಾನಾ ತರಹದ ಮಂದಿ ಕೆಲಸ ಮಾಡುವ ಸ್ಥಳವದು.

ಮಧ್ಯಾಹ್ನದ ಹೊತ್ತಿನಲ್ಲಿ ಒಬ್ಬ ಹುಡುಗಿ ಅಲ್ಲಿಂದ ಮುಂದೆ ತೆರಳುತ್ತಿರುತ್ತಾಳೆ. ಇಷ್ಟೆಲ್ಲ ಇರುವ ಕಡೆ ಒಂದಷ್ಟು ಮಂದಿ ತರಲೆಗಳು ಇರಲೇ ಬೇಕಲ್ಲ. ಅಂತಹ ಒMದು ಪುಂಡರ ಗುಂಪು ಆ ಹುಡುಗಿಯನ್ನು ಛೇಡಿಸುತ್ತದೆ. ಏನೋ ಬರ್ತಿಯಾ...? ಎಂದು ಕೇಳುತ್ತದೆ.

ಇದ್ದಕ್ಕಿದ್ದಂತೆ ಇಡೀ ಮಾರುಕಟ್ಟೆ ಇತ್ತ ತಿರುಗಿ ನೋಡುತ್ತದೆ. ಹಾಗೆ ಕೇಳಿಸಿಕೊಂಡ ಹುಡುಗಿ ತಲೆ ತಗ್ಗಿಸಿ ನಿಂತಿದ್ದಾಳೆ. ಆಗ ಶುರುವಾಗುತ್ತದೆ ನೋಡಿ ಅಸಲಿ ಆಟ. ಅಲ್ಲಿದ್ದವರೆಲ್ಲ ಆ ಪುಂಡರ ಗುಂಪಿಗೆ ಉತ್ತರಿಸುತ್ತಾರೆ.

ಬಲೂನ್​ ಮಾರುವವನು ಬಂದು ಎಲ್ಲಿಗೆ, ಅಷ್ಟು ಹೊತ್ತಿಗೆ ಬರಬೇಕು ಎನ್ನುತ್ತಾನೆ. ಮಕ್ಕಳನ್ನು ಕರೆದೊಯ್ಯುತ್ತಿರುವ ಅಜ್ಜಿ ಕೂಡ, ಮಕ್ಕಳು, ಅಣ್ಣಾ ಯನಿಫಾರ್ಮ್​ಲ್ಲಿ ಬರಬೇಕಾ ಅಥವಾ ಕಲರ್​ ಡ್ರೆಸಲ್ಲ ಅಂತ ಕೇಳುತ್ತಾರೆ.

ಕಾಲಿಲ್ಲದವ ತೆವಳುವ ಗಾಡಿಯಲ್ಲಿ ಬಂದು ಅಣ್ಣಾ ಎಷ್ಟೇ ದೂರವಿದ್ದರೂ ನಾನು ಬರುತ್ತೇನೆ ಎನ್ನುತ್ತಾನೆ. ಕೊನೆಯದಾಗಿ ಆ ಹುಡುಗಿ "ನಾನು ಬರಲ್ಲ, ನಾವು ಬರುತ್ತೇವೆ" ಅಂದು ದಿಟ್ಟತನದಲ್ಲಿ ಉತ್ತರಿಸಿ ಬಿಎಂಟಿಸಿ ಬಸ್​ ಹತ್ತುತ್ತಾಳೆ. ಬಿಎಂಟಿಸಿ ಕಂಡಕ್ಟರ್​ ಹೊರಗೆ ಬಂದು ಎಲ್ಲಿಗೆ ಬರಬೇಕು ಹೇಳಣ್ಣ, ಈಗ ಎಲ್ಲ ಕಡೆ ಬಿಎಂಟಿಸಿ ಬಸ್​ ಇವೆ ಎನ್ನುತ್ತಾನೆ.

ಕೊನೆಗೆ ಪುನೀತ್​ ರಾಜ ಕುಮಾರ್​ ಕಾಣಿಸಿಕೊಳ್ಳುತ್ತಾರೆ. ಅವರು ಹೇಳುವ ಸಂದೇಶ ನಿಜಕ್ಕೂ ಈಗ ಅಗತ್ಯವಾಗಿ ನಾವು ಪಾಲಿಸಬೇಕಾಗಿರುವುದು. ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ಇಂತಹ ಕಣ್ಣು ತೆರೆಸುವಂತಹ ವಿಡಿಯೋ ಬಿಡುಗಡೆ ಮಾಡಿದೆ.

ಈ ವಿಡಿಯೋ ಹಂಚಿಕೊಂಡ ಬಿಎಂಟಿಸಿ, ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು! ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡುಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ ಎಂದು ಬರೆದುಕೊಂಡಿದೆ.