ಜಿಲ್ಲೆ

ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸ್ವಪ್ರೇರಣೆ, ಸಮಯ ನಿರ್ವಹಣೆ ಅಳವಡಿಸಿಕೊಂಡು, ಉದ್ಯಮಶೀಲ ಮಹಿಳೆಯಾಗುವುದರೊಂದಿಗೆ ಆರ್ಥಿಕವಾಗಿಯೂ ಅಭಿವೃದ್ಧಿಯಾಗುವ ಮೂಲಕ ಮಹಿಳೆಯರು ಸಬಲರಾಗಬೇಕು ಎಂದು ಕೆನರಾ ಬ್ಯಾಂಕ್‌ನ ಅರಶಿಣಕುಂಟೆ ಶಾಖೆ ವ್ಯವಸ್ಥಾಪಕಿ ಕಾವ್ಯಾ ಸಲಹೆ ನೀಡಿದರು.
ನೆಲಮಂಗಲ ತಾಲೂಕು ಅರಶಿಣಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದಲ್ಲಿ ಮಾತನಾಡಿದರು. ಜವಾಬ್ದಾರಿ ಅರಿತು, ಮಹಿಳೆಯರು ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಬೇಕು, ಸರ್ಕಾರದ ಜತೆಗೆ ಬ್ಯಾಂಕ್‌ನಲ್ಲಿ ಮಹಿಳೆಯರಿಗೆಂದೇ ಇರುವ ಯೋಜನೆಗಳ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳನ್ನು ಹೆರುವ ಯಂತ್ರವಲ್ಲ ಹೆಣ್ಣು ಕೇವಲ ಮಕ್ಕಳನ್ನು ಹೆರುವ ಯಂತ್ರವಲ್ಲ. ಇಂದು ಎಲ್ಲ ಕ್ಷೇತ್ರಗಳಲ್ಲೂ ಸರಿ ಸಮಾನವಾದ ಪಾಲನ್ನು ಪಡೆದಿದ್ದಾಳೆ, ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾಳೆ ಎಂದು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ರವಿಕುಮಾರ ಹೇಳಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಹಿರಿಯರ ವಾಣಿಯಂತೆ ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾಳೆ. ಮಹಿಳೆಯರು ಬದುಕಿನ ಅವಶ್ಯಗಳ ಪೂರೈಕೆಗಾಗಿ ಕೌಶಲ ಕಲಿತು, ದುಡಿಮೆ ಆರಂಭಿಸಿ, ತಾವುಗಳು ಸಾಧನೆ ಮಾಡಲು ಅಗತ್ಯ ಪ್ರೇರಣೆ ಹೊಂದಿ ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.