ಜಿಲ್ಲೆ

ಮಹಿಳೆಯರು ಎಚ್ಚೆತ್ತುಕೊಳ್ಳದಿದ್ದರೆ ಶೋಷಣೆ ನಿಲ್ಲುವುದಿಲ್ಲ: ವಕೀಲ ಪರಮೇಶ್ವರ್ ಅಭಿಮತ

ಶ್ರೀರಂಗಪಟ್ಟಣ: ಅನಾದಿಕಾಲದಿಂದಲೂ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಸ್ವತಃ ಮಹಿಳೆಯರು ಎಚ್ಚೆತ್ತುಕೊಳ್ಳುವವರೆಗೂ ಶೋಷಣೆ ಮುಂದುವರೆಯುತ್ತಲೇ ಇರುತ್ತದೆ ಎಂದು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪರಮೇಶ್ವರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನನಿತ್ಯ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಲೇ ಇದೆ ಎಂದು ಹೇಳಿದರು.

ಹೆಣ್ಣು ಮಕ್ಕಳು ಗರ್ಭದಲ್ಲಿ ಇದ್ದಾಗಲೇ ಶೋಷಣೆ ಶುರುವಾಗುತ್ತದೆ. ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ದೇವದಾಸಿ ಪದ್ದತಿ, ಸತಿ ಸಹಗಮನ ಪದ್ಧತಿ ಒಂದಲ್ಲ ಒಂದು ಪದ್ಧತಿಯಿಂದ ಹೆಣ್ಣು ಮಕ್ಕಳು ಮಣ್ಣು ಸೇರುವವರೆಗೂ ಶೋಷಣೆ ನಡೆಯುತ್ತಲೇ ಇರುತ್ತವೆ. ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳನ್ನು ಸಮಾಜ ಅತ್ಯಂತ ನಿಕೃಷ್ಟವಾಗಿ ಕಾಣುತ್ತದೆ. ಶುಭ ಸಂದರ್ಭಗಳಿಗೆ ಅವರು ಬರುವುದು ಅನಿಷ್ಟ ಎಂದು ಪರಿಗಣಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸಮಾಜದಲ್ಲಿ ನಾಗರಿಕತೆ ಹೆಚ್ಚಾದಂತೆ ಅನಾಗರಿಕತೆಯೂ ಹೆಚ್ಚುತ್ತಲೇ ಇದೆ. ಮೂಢನಂಬಿಕೆಗೆ ಜನರು ಕಟ್ಟು ಬೀಳುತ್ತಿದ್ದಾರೆ. ಇಂತಹ ಮೂಢನಂಬಿಕೆ ಹಾಗೂ ಶೋಷಣೆಯನ್ನು ತಡೆಯಲು ಕಾನೂನಿನಲ್ಲಿ ಅನೇಕ ಕಾಯ್ದೆಗಳು ಇವೆ. ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಪತ್ನಿ ಸುಮತಿ ಉದ್ಘಾಟಿಸಿ, ನವರಾತ್ರಿ ಶಕ್ತಿ ಹಬ್ಬವಾಗಿದ್ದು, ಹೆಣ್ಣು ಮಕ್ಕಳು ಧೃತಿಗೆಡದೆ ಶಕ್ತಿಯಿಂದ ಹೋರಾಟ ನಡೆಸಿ ತಮ್ಮ ಗುರಿಯನ್ನು ಸೇರಿ ಎಂದು ಶುಭ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಆಶಾ, ತಾಲೂಕು ಯೋಜನಾಧಿಕಾರಿ ತ್ರಿವೇಣಿ ಸೇರಿದಂತೆ ಇತರರಿದ್ದರು.

ಮೆರಗು ತಂದ ಮಹಿಳಾ ಮಣಿಗಳು: ಮಹಿಳಾ ದಸರಾ ಅಂಗವಾಗಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮ ಮೆರಗು ನೀಡಿತು. ಕೊಡಿಯಾಲ ಆಶಾ ಕಾರ್ಯಕರ್ತೆಯರಿಂದ ನೃತ್ಯ ಪ್ರದರ್ಶನ ಮಾಡಲಾಯಿತು. ಈ ಮೂಲಕ ತಾಯಿ ಮಕ್ಕಳ ಆರೋಗ್ಯದ ಕುರಿತಾಗಿ ಕೋಲಾಟದ ಮೂಲಕ ಅರಿವು ಮೂಡಿಸಲಾಯಿತು. ಬೆಳಗೊಳ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಮಾಡಿದ ರೀಮಿಕ್ಸ್ ನೃತ್ಯಕ್ಕೆ ನೆರೆದಿದ್ದವರು ಸಾಥ್ ನೀಡಿದರು. ಕಸಬಾ ಹೋಬಳಿಯ ಆಶಾ ಕಾರ್ಯಕರ್ತೆಯರು ಪರಿಸರ ಕಾಳಜಿ ಸಾರುವ ಗೀತೆಯನ್ನು ಹಾಡಿದರು. ನಂತರ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸೋಬಾನೆ ಪದ, ಜಾನಪದ ಗೀತೆ, ತತ್ವಪದಗಳನ್ನು ಸಾದರ ಪಡಿಸಲಾಯಿತು.