ಜಿಲ್ಲೆ

ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಶ್ಲಾಘನೀಯವೆಂದ ವೇದವ್ಯಾಸ ಕಾಮತ್

Dakshina Kannada

ಮಂಗಳೂರು: ದೈನಂದಿನ ಒತ್ತಡದ ಬದುಕಿನ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಸಾಹಿತಿಗಳು ಕತೆ, ಕವನ, ಲೇಖನ, ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ಭಾನುವಾರ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಸುಧೀಂದ್ರ ಆಡಿಟೋರಿಯಂನಲ್ಲಿ ಜರುಗಿದ ಮಹಿಳಾ ಸಾಹಿತ್ಯೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಂದು ಮಕ್ಕಳು ಸಾಹಿತ್ಯ ಓದುವ ಹವ್ಯಾಸದಿಂದ ವಿಮುಖರಾಗಿದ್ದು, ಶಾಲೆಗಳಲ್ಲಿ ವಾರಕ್ಕೊಮ್ಮೆ ಸಾಹಿತಿಗಳ ಮೂಲಕ ಮಕ್ಕಳಿಗೆ ಸಾಹಿತ್ಯ ರಚನೆ, ಓದುವ ಹವ್ಯಾಸವನ್ನು ಮೂಡಿಸುವ ಕೆಲಸ ಶಿಕ್ಷಣ ಇಲಾಖೆ ಮೂಲಕ ನಡೆಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

&ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಪಂ ಸಿಇಒ ಡಾ.ಕುಮಾರ್, ಇಂದು ಹೆಚ್ಚಿನ ಮನೆಗಳಲ್ಲಿ ಸಾಹಿತ್ಯ ಪುಸ್ತಕಗಳ ಜಾಗವನ್ನು ಟಿ.ವಿ. ಮೊಬೈಲ್, ಐಪ್ಯಾಡ್ ಮೊದಲಾದವುಗಳು ತುಂಬಿವೆ. ನಮ್ಮ ದುಃಖ ನೋವು ಮರೆಯಲು ಪುಸ್ತಕವೇ ಮದ್ದು. ಪುಸ್ತಕ ಒಡೆದ ಮನಸ್ಸನ್ನು ಕೂಡಿಸುತ್ತದೆ ಹೊರತು ಮನಸ್ಸನ್ನು ಒಡೆಯುವ ಕೆಲಸ ಮಾಡುವುದಿಲ್ಲ. ಮಹಿಳೆ ಮನೆಯನ್ನು ಬೆಳಗುವ ಗೂಡುದೀಪ ಮಾತ್ರವಲ್ಲ, ಸಮಾಜವನ್ನು ಬೆಳಗುವ ದೀವಿಗೆ ಕೂಡ ಎಂದರು.

ತುಳು ಕನ್ನಡ ಲೇಖಕಿ ಜಯಮ್ಮ ಚೆಟ್ಟಿಮಾಡ ಅವರಿಗೆ ಡಾ.ಸುನಿತಾ ಶೆಟ್ಟಿ ಮುಂಬಯಿ ಪ್ರಾಯೋಜಿತ ತೌಳವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ಣಾಟಕ ಬ್ಯಾಂಕ್ ಡಿಜಿಎಂ ಸುಮನಾ ಘಾಟೆ, ಶ್ರೀಗುರು ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಯೆಯ್ಯಡಿಯ ಉದ್ಯಮಿ ಜಿತೇಂದ್ರ ಕುಮಾರ್ ಡಿ., ಸಂಘದ ಉಪಾಧ್ಯಕ್ಷೆ ವಿಜಯ ಲಕ್ಷ್ಮಿ ಬಿ.ಶೆಟ್ಟಿ, ಕಾರ್ಯದರ್ಶಿ ಸುಜಾತಾ ಕೊಡ್ಮಣ್, ಜತೆ ಕಾರ್ಯದರ್ಶಿ ಆಕತಿ ಐ.ಎಸ್.ಭಟ್, ಕೋಶಾಕಾರಿ ಶರ್ಮಿಳಾ ಶೆಟ್ಟಿ ಉಪಸ್ಥಿತರಿದ್ದರು.