filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 34; 
ಜಿಲ್ಲೆ

ಗಿರಿಜನ ಸಮಸ್ಯೆ ಆಲಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

 ಹನೂರು: ತಾಲೂಕಿನ ಜೀರಿಗೆಗದ್ದೆ ಗಿರಿಜನ ಆಶ್ರಮ ಶಾಲೆಗೆ ಗುರುವಾರ ಸಂಜೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಭೇಟಿ ನೀಡಿ ಗಿರಿಜನರ ಸಮಸ್ಯೆಯನ್ನು ಆಲಿಸಿದರು. ಜತೆಗೆ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು.

ಜೀರಿಗೆಗದ್ದೆ ಗ್ರಾಮಕ್ಕೆ ಆಗಮಿಸಿದ ಅಧ್ಯಕ್ಷರನ್ನು ಸೋಲಿಗ ಮುಖಂಡರು ವಾದ್ಯ ಮೇಳ ಹಾಗೂ ಸೋಲಿಗರ ನೃತ್ಯದೊಂದಿಗೆ ಸ್ವಾಗತಿಸಿ ಶಾಲೆಗೆ ಕರೆತಂದರು. ಶಾಲೆಯ ಆವರಣದಲ್ಲಿ ಅಧ್ಯಕ್ಷರು ಸಸಿ ನೆಟ್ಟ ಬಳಿಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾದಮ್ಮ ಅವರನ್ನು ಸನ್ಮಾನಿಸಿದರು.

ಬಿರ್ಸಾ ಮುಂಡ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಾಲಾ ಮಕ್ಕಳು ಸಂವಿಧಾನ ಪ್ರಸ್ತಾವನೆ ಓದಿದ್ದಕ್ಕೆ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮಕ್ಕಳ ಬಗ್ಗೆ ಮಾಹಿತಿ ಪಡೆದರು. ಮಕ್ಕಳೊಂದಿಗೆ ಮಾತನಾಡಿದ ಅಧ್ಯಕ್ಷರು, ಕಾಡಿನ ಮಕ್ಕಳಾದ ನಿಮ್ಮಲ್ಲಿ ನಗರ ಪ್ರದೇಶದ ಮಕ್ಕಳಗಿಂತ ಹೆಚ್ಚು ಶಕ್ತಿ ಇದೆ. ಆದ್ದರಿಂದ ನಿರ್ದಿಷ್ಟ ಗುರಿ ಹೊಂದಿ ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು. ಅಲ್ಲದೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಮಕ್ಕಳ ನೃತ್ಯಕ್ಕೆ ಹೆಜ್ಜೆ ಹಾಕಿ ಸಾಥ್ ನೀಡಿದರು.

15 ದಿನದೊಳಗೆ ಆಧಾರ್ ಕಾರ್ಡ್ ಗಾಗಿ ಕ್ರಮವಹಿಸಿ: ಈ ಭಾಗದಲ್ಲಿ ಕಾಡಿನ ಮಕ್ಕಳು ಜನರು ಪ್ರಕೃತಿ ನಡುವೆ ಜೀವನ ನಡೆಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿರುವುದು ಖುಷಿ ತಂದಿದೆ. ಇಲ್ಲಿನ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗಬೇಕಿದೆ. ಆದರೆ ಕೆಲ ಮಕ್ಕಳಿಗೆ ಆಧಾರ್ ಕಾರ್ಡ್ ಇಲ್ಲದಿರುವುದು ನಿಜಕ್ಕೂ ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳಿಗೆ 15 ದಿನಗಳ ಒಳಗಾಗಿ ಆಧಾರ್ ಕಾರ್ಡ್ ದೊರಕುವಂತೆ ಸೂಚಿಸಲಾಗಿದೆ. ಜತೆಗೆ ಎಲ್ಲ ಮಕ್ಕಳಿಗೂ ಸರ್ಕಾರದ ಸವಲತ್ತುಗಳು ಸಿಗಬೇಕು. ಆಶ್ರಮ ಶಾಲೆಯಲ್ಲಿ ಖಾಯಂ ಶಿಕ್ಷಕರು ನೇಮಕ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಧ್ಯಮಗಳಿಗೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ಸಂಬಂಧಪಟ್ಟ ವಿರುದ್ಧ ಶಿಸ್ತುಕ್ರಮ: ಇದೇ ವೇಳೆ ಜೀರಿಗೆ ಗದ್ದೆ ಮಹಿಳೆಯರು ಮಾತನಾಡಿ, ಗ್ರಾಮದಲ್ಲಿನ ಬಹುತೇಕ ಕುಟುಂಬಗಳಿಗೆ ಮನೆ ಇಲ್ಲ. ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸಿಸುತ್ತಿದ್ದೇವೆ, ಇದರಿಂದ ತುಂಬಾ ತೊಂದರೆಯಾಗಿದೆ. ಜತೆಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ದೂರಿದರು. ಇದಕ್ಕೆ ನಾಗಲಕ್ಷ್ಮೀ ಚೌಧರಿ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಈ ಸಂಬಂಧ ಗ್ರಾಮ ಸಭೆ ನಡೆಸಿ ಒಂದು ವಾರದೊಳಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಿಬೇಕು. ಇದರಲ್ಲಿ ನಿರ್ಲಕ್ಷ ತೋರಿದಲ್ಲಿ ಸಿಎಂ ಕಾರ್ಯಾಲಯಕ್ಕೆ ಪತ್ರ ಬರೆದು ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಬಿಂದ್ಯಾ, ತಾಲೂಕು ಅಧಿಕಾರಿ ರಾಜೇಶ್, ಬಿಇಒ ಗುರುಲಿಂಗಯ್ಯ, ತಾಪಂ ಇಒ ಉಮೇಶ್, ಸೆಸ್ಕ್ ಎಇಇ ರಂಗಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗಸ್ವಾಮಿ, ಆರ್‌ಎಫ್‌ಒ ಪ್ರವೀಣ್, ಆರ್ ಐ ಮಹದೇವಸ್ವಾಮಿ, ಪಿಡಿಒ ನಂಜುಂಡಸ್ವಾಮಿ, ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ ಮಾದೇಗೌಡ, ಜಂಟಿ ಕಾರ್ಯದರ್ಶಿ ಮಾದೇವಯ್ಯ, ಕಾರ್ಯದರ್ಶಿ ರಂಗೇಗೌಡ, ಮುಖಂಡರಾದ ಚಂದ್ರು, ಮಾದಯ್ಯ, ಮಹದೇವಸ್ವಾಮಿ ಹಾಗೂ ಇನ್ನಿತರರು ಇದ್ದರು.