ನಾಗರ ಪಂಚಮಿ ನಿಮಿತ್ತ ನೈವೇದ್ಯಕ್ಕೆ ತಯಾರಿಸಿದ ತಂಬಿಟ್ಟಿನ ಉಂಡೆ.  
ಜಿಲ್ಲೆ

ನಾಗರಕಲ್ಲಿಗೆ ತನಿ ಎರೆದ ಮಹಿಳೆಯರು

Shivamogga - Desk - Praveena Kumar S

ಸಾಗರ: ತಾಲೂಕಿನಾದ್ಯಂತ ಸಡಗರ ಸಂಭ್ರದಿಂದ ನಾಗರಪಂಚಮಿ ಹಬ್ಬ ಆಚರಿಸಲಾಯಿತು. ನಗರದ ಹಲವು ಕಡೆ ಇರುವ ಅರಳಿಕಟ್ಟೆಗಳನ್ನು ಶುಚಿಗೊಳಿಸಿ, ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಅರ್ಚಕರು ನಾಗರ ಕಲ್ಲಿಗೆ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರು ಗುಂಪಾಗಿ ಬಂದು ನಾಗರಕಲ್ಲಿಗೆ ತನಿ ಎರೆದು, ತಂಬಿಟ್ಟು ನೈವೇದ್ಯ ಮಾಡಿದರು.
ಪ್ರತಿ ವರ್ಷ ಗ್ರಾಮಾಂತರ ಪ್ರದೇಶದಲ್ಲಿ ಆಂಧ್ರ ಮೂಲದ ಕೆಲವರು ಹಲ್ಲು ಕಿತ್ತ ಹಾವುಗಳನ್ನು ಮನೆಗಳಿಗೆ ತಂದು ನಿಜ ನಾಗರ ಪೂಜೆ ಮಾಡಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಆಚರಣೆ ಕಂಡುಬರಲಿಲ್ಲ.
ಮೆಸ್ಕಾಂ ಕಚೇರಿಯ ಹಿಂಭಾಗದಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷವಾಗಿ ನಾಗರ ಪೂಜೆ, ನಾಗಾರಾಧನೆ, ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ ಜರುಗಿತು. ಚಾಮರಾಜಪೇಟೆಯ ಗಣಪತಿ ದೇವಸ್ಥಾನದ ಸಮೀಪದ ರಾಮ ದೇವಾಲಯದ ಎದುರಿನ ಅರಳಿಕಟ್ಟೆ ಒಳಗೊಂಡಂತೆ ವಿವಿಧ ಕಡೆ ನಾಗರ ಕಲ್ಲಿಗೆ ಅಭಿಷೇಕ ಪೂಜೆಗಳು ನಡೆಯಿತು.ಹೂವು, ಹಣ್ಣು, ತರಕಾರಿ ಮುಂತಾದ ದಿನನಿತ್ಯ ವಸ್ತುಗಳ ಬೆಲೆ ದುಬಾರಿಯಾದರೂ ಜನರು ಹಬ್ಬ ಮಾಡಲು ಖರೀದಿಸಿದರು.
ಇತ್ತೀಚೆಗೆ ಹಬ್ಬಹರಿದಿನಗಳ ಆಚರಣೆ, ಆರಾಧನೆಗಳು ಕಡಿಮೆಯಾಗುತ್ತಿದೆ. ಶ್ರಾವಣ ಮಾಸದ ನಾಗರಪಂಚಮಿಯಿಂದ ಎಲ್ಲ ಹಬ್ಬಗಳು ಆರಂಭಗೊಳ್ಳುತ್ತವೆ. ಮನೆಯ ಹೆಣ್ಣುಮಕ್ಕಳು ತಂಬಿಟ್ಟು ತಯಾರಿಸಿ, ನಾಗರ ಕಲ್ಲಿಗೆ ತನಿ ಎರೆದು ಸಂಭ್ರಮಿಸುತ್ತಾರೆ. ಆದರೆ ಈ ಸಂಸ್ಕೃತಿ, ಸಂಸ್ಕಾರದ ಮಹತ್ವ ವರ್ಷ ಕಳೆದಂತೆ ಕಡಿಮೆಯಾಗುತ್ತಿದ್ದು ಯುವ ಜನರಲ್ಲಿ ಅರಿವು ಮೂಡಿಸಬೇಕು ಎನ್ನುತ್ತಾರೆ ಗೃಹಿಣಿ ರಶ್ಮಿ ಮಂಜುನಾಥ್.
ಹೊಲ ಗದ್ದೆಗಳಲ್ಲಿ ಕ್ರಿಮಿನಾಶಕ ಸಿಂಪಡಣೆಯಿಂದಾಗಿ ಹಾವಿನ ಸಂತತಿ ಕಡಿಮೆ ಆಗುತ್ತಿದೆ. ಅದರಲ್ಲೂ ನಾಗರಹಾವು ಕ್ಷೀಣಿಸುತ್ತಿವೆ. ಕ್ರಿಮಿನಾಶಕದಿಂದಾಗಿ ಇಲಿ, ಹೆಗ್ಗಣಗಳೂ ಸಾಯುತ್ತಿದ್ದು ಅವುಗಳನ್ನು ನುಂಗುವ ಹಾವುಗಳೂ ಸಾವನ್ನಪ್ಪುತ್ತಿವೆ. ಜೀವವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಿದೆ. ಅದರಲ್ಲೂ ನಾಗರ ಹಾವುಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ನಾಗರಪಂಚಮಿಯಂದು ಹೇಗೆ ನಾಗಾರಾಧನೆ ಮಾಡುತ್ತೇವೆಯೋ ನಮ್ಮ ಪ್ರಾಣಿ ಜಗತ್ತು ಮತ್ತು ಕೀಟ ಜಗತ್ತುಗಳನ್ನು ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು ಎನ್ನುತ್ತಾರೆ ಉರಗ ಪ್ರೇಮಿ ಅನೂಪ್.