ದೇವದಾಸಿ ತಾಯಂದಿರು, ಮಕ್ಕಳಿಗೆ ಪುನರ್ವಸತಿ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರ
ಹೊಸಪೇಟೆ: ಅನಿಷ್ಟ ದೇವದಾಸಿ ಪದ್ಧತಿ ಇಂದಿನ ಆಧುನಿಕ ಯುಗದಲ್ಲೂ ಜೀವಂತವಾಗಿರುವುದು ನಾಚಿಕೇಡಿನ ಸಂಗತಿ ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ. ಭಾಗ್ಯಲಕ್ಷ್ಮೀ ವಿ. ಬೇಸರ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ, ತಳಸಮುದಾಯಗಳ ಅಧ್ಯಯನ ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆ, ಭಾರತದ ವಿಶ್ವವಿದ್ಯಾಲಯ, ಡಾ.ಬಾಬು ಜಗನಜೀವನರಾಂ ಸಂಶೋಧನಾ ಸಂಸ್ಥೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಬುಧವಾರ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಮತ್ತು ಕಾನೂನುಗಳು ಮತ್ತು ದೇವದಾಸಿ ತಾಯಂದಿರು ಮತ್ತು ಮಕ್ಕಳ ಪುನರ್ವಸತಿ ಮುಕ್ತ ಅವಲೋಕನ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಆಚರಣೆ ನೆಪದಲ್ಲಿ ಯುವತಿಯರನ್ನು ದೇವದಾಸಿ ಪದ್ಧತಿಗೆ ದೂಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇದರಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅನಿಷ್ಠ ಆಚರಣೆಗಳ ನಿರ್ಮೂನೆ ಮತ್ತು ಮಾಜಿ ದೇವದಾಸಿಯರು, ಅವರ ಕುಟುಂಬಗಳಿಗೆ ಪುನರ್ವಸತಿ ಕೆಲಸಗಳು ಇನ್ನಷ್ಟು ಚುರುಕಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಜಾ ಪ್ರತಿನಿಧಿಗಳು ಕೂಡಾ ಸಮಾಜಿಕ ಕಳಕಳಿಯನ್ನು ತೋರಬೇಕು. ತಳಸಮುದಾಯದಿಂದ ವಿದ್ಯಾವಂತರು ಅಧಿಕಾರಿಗಳಾಗಿ ಸಮುದಾಯದ ಬದಲಾವಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಭಾರತ ವಿಶ್ವವಿದ್ಯಾಲಯದ ಕಾರ್ಯಾಗಾರದ ಸಂಯೋಜಕ ಡಾ.ಆರ್.ವಿ ಚಂದ್ರಶೇಖರ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆ, ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಕೆಲ ಸ್ವಯಂ ಸೇವಾ ಸಂಸ್ಥೆಗಳು ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಆದರೆ, ವಾಸ್ತವಾಂಶ ಬೇರೆಯಿದೆ. ಈ ಬಗ್ಗೆ ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಗಂಭೀರವಾಗಿ ಗಮನ ಹರಿಸಬೇಕು. ದೇವದಾಸಿ ಮಹಿಳೆ ಯರ ಪುನರ್ವಸತಿ ಜತೆಗೆ ಅವರ ಕುಟುಂಬದ ಪುನರ್ವಸತಿಗೂ ಒತ್ತು ನೀಡಬೇಕು. ಅಂತರ್ಜಾತಿ ವಿವಾಹಕ್ಕೆ ನೀಡುವಂತೆ
ದೇವದಾಸಿ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ನೀಡಬೇಕು. ನ್ಯಾ.ನಾಗಮೋಹನದಾಸ್ ವರದಿಯಂತೆ ದೇವದಾಸಿಯರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಮ್ಮ ಫೌಂಡೇಶನಿನ ಶೋಭಾ ಗಸ್ತಿ ಅಧ್ಯಕ್ಷತೆ ವಹಿಸಿದರು. ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ, ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಡಿ.ಪ್ರಶಾಂತ್, ಪ್ರಾಧ್ಯಾಪಕ ಡಾ. ಜನಾರ್ಧನ್, ಡಾ. ತಿಪ್ಪೇಸ್ವಾಮಿ ಎಚ್., ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಸಂಚಾಲಕ ಮಂಜುಳಾ ಮಾಳ್ಗಿ, ಡಾ. ಗೀತಮ್ಮ ಕೆ. ವೇದಿಕೆ ಮೇಲಿದ್ದರು.