ಜಿಲ್ಲೆ

ಮಹಿಳೆಯರು ಬಂಡೆಕಲ್ಲಿನಂತೆ ಗಟ್ಟಿಯಾಗಬೇಕು

 ಹನೂರು: ಮಹಿಳೆಯರು ಬಂಡೆಕಲ್ಲಿನಂತೆ ಗಟ್ಟಿಯಾಗಿ ನಿಲ್ಲಬೇಕು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದು ಸಬಲರಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ಪಟ್ಟಣದ ಆರ್.ಎಸ್ ದೊಡ್ಡಿ ಬಳಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಮಹಿಳೆಯರು ಜೋರಾಗಿ ಮಾತನಾಡಿದರೆ ಬಜಾರಿ ಎಂಬ ಪಟ್ಟ ಕಟ್ಟುತ್ತಾರೆ. ಜೋರಾಗಿ ಮಾತನಾಡುವ ಪುರುಷನನ್ನು ಸಮಾಜ ಹೊಗಳುತ್ತದೆ. ಇದರಿಂದ ಹೋರಾಟ ಮಾಡುವುದು ಕಷ್ಟ. ಆದ್ದರಿಂದ ಮಹಿಳೆಯರು ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಶಿಕ್ಷಣವನ್ನು ಪಡೆದುಕೊಂಡು ಶಿಕ್ಷಿತರಾಗಬೇಕು. ಈ ಮೂಲಕ ಹರಿಯುವ ನೀರಿಗೆ ಮರಳಾಗದೇ ಬಂಡೆಯಾಗಿ ನೀರನ್ನೇ ಬದಲಾಯಿಸುವ ಶಕ್ತಿಯಾಗಬೇಕು ಎಂದರು.

ಅಧಿಕಾರಿಗಳು ಸರ್ಕಾರ ನೀಡಿರುವ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು. ಪ್ರಜಾಪ್ರಭುತ್ವದ 4ನೇ ಅಂಗ ಪತ್ರಿಕಾ ರಂಗ. ಪತ್ರಕರ್ತರು ಸತ್ಯಸತ್ಯಾತೆಯನ್ನು ವಸ್ತುನಿಷ್ಟವಾಗಿ ವರದಿ ಮಾಡಬೇಕು ಎಂದರು.

ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಪತ್ರಕರ್ತರು ಸರ್ಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹನೂರು ತಾಲೂಕಿನ ಪತ್ರಕರ್ತರು ಕ್ರಿಯಾಶೀಲರಾಗಿದ್ದು, ಉತ್ತಮ ವರದಿಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಪತ್ರಿಕಾ ಧರ್ಮವನ್ನು ಪಾಲಿಸಬೇಕು. ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಗ್ರಾಮಗಳಲ್ಲಿ ಈ ಹಿಂದೆ ಅಗತ್ಯ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿತ್ತು. ಇದೀಗ ಬಗೆಹರಿಯುತ್ತಾ ಸಾಗಿದೆ. ರಸ್ತೆಗಳು ಅಭಿವೃದ್ಧಿ ಕಾಣುತ್ತಿವೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪತ್ರಕರ್ತರಾದ ರಮೇಶ್ ಗುಂಡಾಪುರ, ಹನೂರಿನ ಪ್ರಭುಸ್ವಾಮಿ ಅವರಿಗೆ ದತ್ತಿ ಪ್ರಶಸ್ತಿ ನೀಡಲಾಯಿತು. ಪತ್ರಿಕಾ ವಿತರಕ ಕಾಮಗೆರೆ ಸೋಮಶೇಖರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಬಳಿಕ ಮಹಿಳೆಯರು ಅಗತ್ಯ ಮೂಲಸೌಕರ್ಯ, ಉದ್ಯೋಗ, ಇನ್ನಿತರ ಸಮಸ್ಯೆಯನ್ನು ಬಗೆಹರಿಸುವಂತೆ ಡಾ. ನಾಗಲಕ್ಷ್ಮೀ ಚೌಧರಿ ಅವರಲ್ಲಿ ಆಹವಾಲು ಸಲ್ಲಿಸಿದರು. ತಹಸೀಲ್ದಾರ್ ಎನ್.ಕೆ ಚೈತ್ರಾ ಅವರಿಗೆ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಯಿತು.

ಮಾಜಿ ಶಾಸಕರಾದ ಆರ್.ನರೇಂದ್ರ, ಪರಿಮಳಾ ನಾಗಪ್ಪ, ಪಪಂ ಅಧ್ಯಕ್ಷೆ ಮುಮ್ತಾಜ್‌ಬಾನು, ತಹಸೀಲ್ದಾರ್ ಎನ್.ಕೆ ಚೈತ್ರಾ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯ ಪರಿಷತ್ ಸದಸ್ಯ ಗೂಳೀಪುರ ನಂದೀಶ್, ತಾಲೂಕು ಅಧ್ಯಕ್ಷ ಎಂ. ಮಹಾದೇಶ್ ಇತರರಿದ್ದರು.