ಕಂಪ್ಲಿ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸ್ವ ಉದ್ಯೋಗಿಗಳಾಗಬೇಕು. ಇದಕ್ಕಾಗಿ ಪೂರಕ ತರಬೇತಿ ಪಡೆಯುವಲ್ಲಿ ಜಾಗೃತಿ ತೋರಬೇಕು ಎಂದು ಕೆನರಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯ ತರಬೇತುದಾರ ಜೆ.ಜಡಿಯಪ್ಪ ಹೇಳಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಉದ್ಯೋಗ ಪ್ರೇರಣಾ ಶಿಬಿರದಲ್ಲಿ ಮಂಗಳವಾರ ಉಪನ್ಯಾಸ ನೀಡಿದರು.
ರುಡ್‌ಸೆಟ್, ಆರ್.ಸೆಟ್ ಸಂಸ್ಥೆಗಳಿಂದ ವಿವಿಧ ಬ್ಯೂಟಿಷನ್, ಟೈಲರಿಂಗ್, ಸೋಪ್ ಆಯಿಲ್, ಫಿನೈಲ್, ಸೋಪಿನ ಪುಡಿ, ಊದುಬತ್ತಿ, ಮೇಣದಬತ್ತಿ ತಯಾರಿ, ಫೋಟೋ, ಎಲೆಕ್ಟ್ರಾನಿಕ್ಸ್ ನಾನಾ ಸ್ವಉದ್ಯೋಗಗಳ ತರಬೇತಿ ನೀಡುತ್ತಿದ್ದು, ಮಹಿಳೆಯರು ಸದುಪಯೋಗಪದುಕೊಳ್ಳಬೇಕು. ಮಾರುಕಟ್ಟೆ ಕೌಶಲ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಟ್ರಸ್ಟ್‌ನ ಯೋಜನಾಧಿಕಾರಿ ಹಾಲಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಉದ್ಯೋಗದಿಂದ ಆರ್ಥಿಕ ಪ್ರಗತಿ ಹಾಗೂ ಜೀವನ ಸುಧಾರಣೆಗೊಳ್ಳುತ್ತದೆ ಎಂದರು.
ಪ್ರಗತಿಕೃಷ್ಣ ಬ್ಯಾಂಕಿನ ಸಿಬ್ಬಂದಿ ಗುರುಕೃಷ್ಣ, ಸ್ವಉದ್ಯೋಗಕ್ಕೆ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳ ಸಮಗ್ರ ಮಾಹಿತಿ ನೀಡಿದರು. ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಮಂಜುಳಾ, ಒಕ್ಕೂಟದ ಅಧ್ಯಕ್ಷೆ ರೇಣುಕಾ, ಸಮನ್ವಯ ಅಧಿಕಾರಿ ರೇಖಾ, ವಲಯ ಮೇಲ್ವಿಚಾರಕ ರವಿಚಂದ್ರ ಇತರರಿದ್ದರು.
ಟ್ರಸ್ಟ್‌ನಿಂದ ತಾಲೂಕಿನ ಎಮ್ಮಿಗನೂರು, ರಾಮಸಾಗರ ಗ್ರಾಮಗಳಲ್ಲಿ ಮಂಗಳವಾರ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಬೀದಿನಾಟಕ ಪ್ರದರ್ಶಿಸಲಾಯಿತು.