ಜಿಲ್ಲೆ

ಎಲ್ಲ ರಂಗದಲ್ಲೂ ಮಹಿಳೆಯರು ಸಾಮರ್ಥ್ಯ ಸಾಬೀತು; ಮಧೂಶ್ ಪೂವಯ್ಯ

ಮಡಿಕೇರಿ: ಭಾರತದಂತಹ ರಾಷ್ಟ್ರದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಮತ್ತು ಗೌರವವಿದ್ದು, ಹೆಣ್ಣು ಕೇವಲ ಕುಟುಂಬ ನಿರ್ವಹಣೆ ಜತೆಗೆ ಎಲ್ಲ ರಂಗದಲ್ಲೂ ತನ್ನ ಸಾಮರ್ಥ್ಯ ಸಾಬೀತು ಪಡಿಸುತ್ತಿರುವುದು ಸಂತಸದ ವಿಚಾರ ಎಂದು ಮುಲ್ಲೆಂಗಡ ಮಧೂಶ್ ಪೂವಯ್ಯ ಅಭಿಪ್ರಾಯಪಟ್ಟರು.


ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ನಾಂದಿ ಪೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಇವರ ಸಹ ಭಾಗಿತ್ವದೊಂದಿಗೆ ಕಾಲೇಜಿನ ಐ.ಕ್ಯೂ.ಎ.ಸಿ. ಮತ್ತು ಉದ್ಯೋಗ ಕೋಶ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಒಂದು ವಾರದ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರವನ್ನು ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೆಂಗಡ ಮಧೂಶ್ ಪೂವಯ್ಯ ಉದ್ಘಾಟಿಸಿ ಮಾತನಾಡಿದರು.


ಮಹಿಳೆಗೆ ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ತರಬೇತಿ ಉದ್ಘಾಟನೆ ನಡೆಸಿದ್ದು ಹರ್ಷ ತಂದಿದ್ದು ತರಬೇತಿ ಯಶಸ್ವಿಯಾಗಲೆಂದು ಶುಭ ಹಾರೈಸಿದರು.


ಪೌಂಡೇಶನ್ ತರಬೇತುದಾರ ಚಿನ್ನಿ ಅಜಯ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪಡೆದು ಉದ್ಯೋಗವಿಲ್ಲದೆ ಸಂಕಷ್ಟದ ಸ್ಥಿತಿ ತಲುಪಿದ್ದಾರೆ. ಮತ್ತೊಂದೆಡೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅನೇಕ ಉದ್ಯೋಗಗಳು ಖಾಲಿ ಇದೆ. ಆದರೆ ಖಾಸಗಿ ವಲಯ ಬಯಸುವ ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಗೌಣವಾಗಿದೆ. ಹಾಗಾಗಿ ನೌಕರ ಮತ್ತು ಸಂಸ್ಥೆಯ ನಡುವೆ ಇರುವ ಅಂತರವನ್ನು ಹೋಗಲಾಡಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ನಾಂದಿ ಪೌಂಡೇಶನ್ ಮುಂದಾಗಿದೆ. ಇದರ ಸಂಪೂರ್ಣವಾದ ಸದುಪಯೋಗವನ್ನು ಪಡೆದುಕೊಂಡು ಉದ್ಯೋಗ ಹೊಂದುವಂತೆ ವಿದ್ಯಾರ್ಥಿನಿಯರಿಗೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಪ್ರತಿಯೊಬ್ಬರೂ ಉದ್ಯೋಗವನ್ನು ಪಡೆದು ಸ್ವಾವಲಂಬಿಗಳಾಗಿ ರಾಷ್ಟ್ರದ ಅಭಿವೃದ್ಧಿಗೆ ಪಾತ್ರರಾಗಬೇಕೆಂದು ತಿಳಿಸಿದರು.


ವೇದಿಕೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ನಿಗಮದ ಸಂಯೋಜಕ ರವಿಕುಮಾರ್, ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಎಂ.ಎಂ.ಸುನೀತ, ಕಾಲೇಜಿನ ಉದ್ಯೋಗ ಕೋಶ ಸಮಿತಿಯ ಸಂಚಾಲಕ ಅರ್.ರಘುರಾಜ್ ಇತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ೯೦ ವಿದ್ಯಾರ್ಥಿನಿಯರು ಭಾಗವಹಿಸಿದರು.