ಜಿಲ್ಲೆ

ಬೈಕ್ ಚಲಾಯಿಸಲಿದ್ದಾರೆ ಮಹಿಳಾ ಪೊಲೀಸರು, ತರಬೇತಿ ಆರಂಭ

ಮೈಸೂರು: ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಈಗ ನಗರದ ರಕ್ಷಣೆಗೂ ಗಸ್ತು ಮಾಡಲಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಪೊಲೀಸರು ಇನ್ನು ಮುಂದೆ ಬೈಕ್‌ಗಳನ್ನು ಚಲಾಯಿಸಿ ಕಾರ್ಯ ನಿರ್ವಹಿಸಲಿದ್ದಾರೆ.

ಕಾನ್‌ಸ್ಟೆೆಬಲ್ಗಳಾಗಿ ಆಯ್ಕೆಯಾಗಿ ಇಲಾಖಾ ತರಬೇತಿಯನ್ನು ಪಡೆಯುತ್ತಿರುವ ಮಹಿಳಾ ಪೊಲೀಸರಿಗೆ ಇನ್ನು ಮುಂದೆ ಬೈಕ್ ಚಲಾಯಿಸಲು ತರಬೇತಿ ನೀಡಲಾಗುತ್ತಿದೆ. ಜ್ಯೋತಿ ನಗರದಲ್ಲಿರುವ ಮಹಿಳಾ ಪೊಲೀಸ್ ತರಬೇತಿ ಶಾಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಈ ತರಬೇತಿಯನ್ನು ಪ್ರಾರಂಭಿಸಲು ಪಠ್ಯಕ್ರಮ ರೂಪುಗೊಂಡಿದ್ದು, ಇದಕ್ಕೆ ಪೂರಕ ಕಾರ್ಯ ಸಿದ್ಧಗೊಳ್ಳುತ್ತಿವೆ.

ಮೈಸೂರಿನಲ್ಲಿ ಇರುವುದು ಮಹಿಳಾ ಪೊಲೀಸರಿಗೆ ತರಬೇತಿ ನೀಡುವ ರಾಜ್ಯದ ಏಕೈಕ ಶಾಲೆ ಇದಾಗಿದ್ದು, ಈ ಶಾಲೆಯಲ್ಲಿ ಎಂಟು ತಿಂಗಳು ಮಾತ್ರ ತರಬೇತಿಯನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಎರಡು ತಿಂಗಳ ಅವಧಿಯನ್ನು ಹೆಚ್ಚು ಮಾಡಿ, ಒಟ್ಟು ಹತ್ತು ತಿಂಗಳು ತರಬೇತಿ ನೀಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಾಂತ್ರಿಕವಾಗಿ ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಸಿಕೊಡಲಾಗುತ್ತಿದೆ. ಇದರೊಂದಿಗೆ ಇಂದಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಲು ತರಬೇತಿಗಾಗಿ ಎರಡು ತಿಂಗಳ ಕಾಲ ಹೆಚ್ಚುವರಿ ತರಬೇತಿ ನೀಡಲಾಗುತ್ತಿದೆ.

ಮಹಿಳಾ ಪೇದೆಗಳು ಸ್ಕೂಟರ್ ಚಲಾಸುತ್ತಿದ್ದರೂ ಪೊಲೀಸ್ ಗತ್ತು ಇರುವುದಿಲ್ಲ. ಅದ್ದರಿಂದ ಪುರುಷರಂತೆ ಮಹಿಳಾ ಪೇದೆಗಳು ಬೈಕ್ ಚಾಲನೆ ಮಾಡಬೇಕು ಎನ್ನುವ ಉದ್ದೇಶವನ್ನು ಇಲಾಖೆ ಹೊಂದಿದೆ. ಹೀಗಾಗಿ ಬೈಕ್ ರೈಡಿಂಗ್ ಸಹ ಕಲಿಸಿಕೊಡಲಾಗುತ್ತದೆ. ತರಬೇತಿಯ ಪಠ್ಯಕ್ರಮದಲ್ಲಿ 21 ಗಂಟೆಗಳ ಅವಧಿಯ ಪಠ್ಯವನ್ನು ಬೈಕ್ ಚಾಲನೆ ವಿಷಯಕ್ಕೆ ಮೀಸಲಿಡಲಾಗಿದೆ.

ಪ್ರಾಥಮಿಕವಾಗಿ ಸಾಮಾನ್ಯ ಮಾಹಿತಿ:

ಪ್ರಾಥಮಿಕವಾಗಿ ಬೈಕ್‌ನ ಸಾಮಾನ್ಯ ಮಾಹಿತಿ, ನಿರ್ವಹಣೆ ಮಾಡುವ ಬಗ್ಗೆ, ಆನ್ ಆ್ಯಂಡ್ ಆಫ್ ಮಾಡುವುದು, ಮೂವಿಂಗ್ ಬ್ಯಾಲೆನ್ಸ್, ಟ್ರಾಫಿಕ್ ಸಿಗ್ನಲ್, ರಸ್ತೆಯಲ್ಲಿ ಬೈಕ್ ಓಡಿಸುವಾಗ ಕೈಯಿಂದ ಸನ್ನೆ ತೋರಿಸುವ ವಿಧಾನ, ಬೈಕ್‌ನಲ್ಲಿ ಇರುವ ಇಂಡಿಕೇಟರ್ ಬಳಸುವ ಬಗ್ಗೆ, ಬೈಕ್‌ನ ಸಣ್ಣ ಪುಟ್ಟ ರಿಪೇರಿ ಕುರಿತು ತರಬೇತಿ ಅವಧಿಯಲ್ಲಿ ತಿಳಿಸಿಕೊಡಲಾಗುವುದು.

ಅಲ್ಲದೆ ಮೈದಾನದಲ್ಲಿ ಪ್ರತಿದಿನ ಒಂದು ಗಂಟೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಇಲ್ಲಿ ಬೈಕ್ ಓಡಿಸುವುದನ್ನು ಪರಿಣತರಿಂದ ಕಲಿಸಿಕೊಡಲಾಗುತ್ತದೆ. ಬೈಕ್ ಓಡಿಸುವುದು ಗೊತ್ತಿಲ್ಲದವರಿಗೆ ಗೇರ್‌ರಹಿತ ಬೈಕ್ ಕಲಿಸಲಾಗುತ್ತದೆ. ಈಗಾಗಲೇ ಬೈಕ್ ಓಡಿಸುವವರಿಗೆ ಗೇರ್ ಬೈಕ್ ಅನ್ನು ಕಲಿಸಿಕೊಡಲಾಗುತ್ತದೆ.

ಬೈಕ್ ಕಲಿಸುವ ಉದ್ದೇಶ:

ಕೆಲವೊಂದು ಪ್ರಕರಣಗಳನ್ನು ಮಹಿಳಾ ಪೊಲೀಸರೇ ತನಿಖೆ ನಡೆಸಬೇಕಾಗಿರುತ್ತದೆ. ಇಂತಹ ಸಮಯದಲ್ಲಿ ಅವರು ಘಟನಾ ಸ್ಥಳಕ್ಕೆ ತಲುಪಲು ಬೈಕ್ ಓಡಿಸುವುದು ಗೊತ್ತಿದ್ದರೆ ಒಬ್ಬರೇ ಹೋಗಬಹುದು. ಇಲ್ಲವೆಂದರೆ ಪುರುಷ ಪೊಲೀಸರನ್ನು ಜತೆ ಮಾಡಿ ಕಳುಹಿಸಬೇಕಾಗುತ್ತದೆ. ಇದರಿಂದ ಒಂದು ಕೆಲಸಕ್ಕೆ ಇಬ್ಬರು ಹೋಗಬೇಕಾಗುತ್ತದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ತರಬೇತಿ ಅವಧಿಯಲ್ಲೇ ಬೈಕ್ ಓಡಿಸುವುದನ್ನು ಕಲಿಸಿದರೆ ಮಹಿಳಾ ಪೊಲೀಸರು ತಮಗೆ ವಹಿಸಿದ ಕೆಲಸವನ್ನು ಬೇರೆಯವರ ಅವಲಂಬನೆ ಇಲ್ಲದೆ ತಾವೇ ಮಾಡಿ ಮುಗಿಸಬಹುದು. ಅಲ್ಲದೆ ಕರ್ತವ್ಯ ನಿರ್ವಹಣೆ, ಗಸ್ತು ಮಾಡಲು ಅನುಕೂಲವಾಗುತ್ತದೆ ಎನ್ನುವ ಉದ್ದೇಶ ಈ ತರಬೇತಿಯು ಹೊಂದಿದೆ.

ಸಂಚಾರ ವಿಭಾಗದಲ್ಲಿಯೂ ಕರ್ತವ್ಯ

ಮಹಿಳೆಯರು ಪೊಲೀಸ್ ಇಲಾಖೆಯಲ್ಲಿದ್ದರೂ ಕಾನೂನು ಸುವ್ಯವಸ್ಥೆ ಜವಾಬ್ದಾರಿಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷದಲ್ಲಿ ಮಹಿಳಾ ಪೇದೆಗಳನ್ನು ಸಂಚಾರ ನಿಯಂತ್ರಣಕ್ಕೂ ನಿಯೋಜಿಸಲಾಗುತ್ತಿದೆ. ಹೀಗಾಗಿ ಕೇವಲ ಖಾಕಿ ಸಮವಸ್ತ್ರ ಧರಿಸುತ್ತಿದ್ದ ಮಹಿಳಾ ಪೇದೆಗಳು ಈಗ ಬಿಳಿ ಅಂಗಿ ತೊಟ್ಟು ಸಂಚಾರ ನಿಯಂತ್ರಣದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

20 ಬೈಕ್‌ಗಳು ಬಂದಿವೆ

ತರಬೇತಿ ಪಡೆಯುತ್ತಿರುವ 258 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಬೈಕ್ ತರಬೇತಿ ನೀಡಲು ಕೇಂದ್ರ ಕಚೇರಿಯಿಂದ 20 ಬೈಕ್‌ಗಳನ್ನು ನೀಡಲಾಗಿದೆ. ಕರ್ತವ್ಯದಲ್ಲಿ ವೇಗ, ಇನ್ನಷ್ಟು ಶಿಸ್ತು ತರುವ ಉದ್ದೇಶದಿಂದ ಬೈಕ್ ತರಬೇತಿ ನೀಡಲಾಗುತ್ತಿದೆ. ಈ ವರ್ಷ ತರಬೇತಿಯಲ್ಲಿ ಇದನ್ನು ಸೇರ್ಪಡೆ ಮಾಡಲಾಗಿದೆ.

ಗೀತಾ ಪ್ರಸನ್ನ

ಪ್ರಾಂಶುಪಾಲೆ, ಮಹಿಳಾ ಪೊಲೀಸ್ ತರಬೇತಿ ಶಾಲೆ

ಮೈಸೂರು