ಮದ್ದೂರು ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಗೌರವಿಸಲಾಯಿತು. ಡಾ.ವಸುಂಧರಾ ಭೂಪತಿ, ಡಾ.ಮೀರಾಶಿವಲಿಂಗಯ್ಯ, ವಿ.ಹರ್ಷ ಪಣ್ಣೆದೊಡ್ಡಿ, ಪ್ರೊ.ಕೆ.ಬಿ.ನಾರಾಯಣ, ಸಿದ್ದಲಿಂಗು, ಶ್ರೀಲತಾ ಇದ್ದರು.  
ಜಿಲ್ಲೆ

ಮುಖ್ಯವಾಹಿನಿಗೆ ಬರಲು ಮಹಿಳೆಯರಿಗೆ ಶಿಕ್ಷಣ ಅಗತ್ಯ

ಅಭಿನಯ್ ಎಚ್.ಎಂ

ಮದ್ದೂರು: ಸಮಾಜದ ಮುಖ್ಯವಾಹಿನಿಗೆ ಬರಲು ಮಹಿಳೆಯರಿಗೆ ಶಿಕ್ಷಣ ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿದ್ದಾರೆ. ಹೆಣ್ಣು ಸಂಸಾರದ ಕಣ್ಣು ಎಂಬಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಬಾರದು. ವೃತ್ತಿ ಸೇರಿದಂತೆ ಯಾವುದರಲ್ಲೂ ತಾರತಮ್ಯ ಇರಬಾರದು ಎಂದರು.

ಜಿಲ್ಲೆಯಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹುದರಿಂದಲೇ ಪ್ರಸ್ತುತ ಹೆಣ್ಣಿನ ಸಂಖ್ಯೆ ಅನುಪಾತದಲ್ಲಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

10ನೇ ಶತಮಾನದಿಂದ ಈವರೆಗೆ ಹಲವಾರು ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆದರ್ಶನ, ಸಾಧನೆಗಳನ್ನು ಪ್ರತಿ ಮಹಿಳೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಭಿನಂದಿಸಿ ಮಾತನಾಡಿದ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ, ಸಮಾಜದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಹೆಚ್ಚಾಗಿ ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾಳೆ. ಉನ್ನತ ಸ್ಥಾನಗಳಲ್ಲಿ ಮಹಿಳೆ ಗುರುತಿಸಿಕೊಂಡು ಅದ್ವಿತೀಯ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಪಣ್ಣೆದೊಡ್ಡಿ ವಿ.ಹರ್ಷ, ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿ ನಾಡು ಮತ್ತು ದೇಶಕ್ಕೆ ಕೀರ್ತಿ ತರುತ್ತಿರುವುದು ಹರ್ಷದ ವಿಷಯ ಎಂದರು.

ವಿಶ್ರಾಂತ ಪ್ರಾಂಶುಪಾಲೆ ಪ್ರೊ.ಎಸ್.ಎನ್.ಗಾಯತ್ರಿ, ಎ.ಎಸ್.ಜಯಲಕ್ಷ್ಮೀ, ಡಾ.ಎಸ್.ಸಿ.ಮಂಗಳಾ, ಸೌಭಾಗ್ಯಮ್ಮ ಮಹದೇವು, ಕೃಷ್ಣವೇಣಿ ಮದ್ದೂರು, ಕೆ.ಪಿ.ಸುಜಾತಾ, ರಾಜಮಣಿ ಕಲ್ಲಾರೆಪುರ, ಮಮತತಿಮ್ಮೇಗೌಡ ಅವರನ್ನು ಗೌರವಿಸಲಾಯಿತು. ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ವಿ.ಹರ್ಷ, ನಿವೃತ್ತ ಉಪನ್ಯಾಸಕಿರಾದ ಶ್ರೀಲತಾ, ಸರ್ವಮಂಗಳಾ, ಕಸಾಪ ಗೌರವ ಕಾರ್ಯದರ್ಶಿ ಮಹದೇವಸ್ವಾಮಿ ಗಾಮನಹಳ್ಳಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಯ್ಯ, ಪದಾಧಿಕಾರಿಗಳಾದ ಸಿದ್ದಲಿಂಗ, ಈರಯ್ಯ ಇದ್ದರು.