ಜಿಲ್ಲೆ

ಮಹಿಳಾ ಸಾಹಿತ್ಯ ಪರಿಷತ್ ಸ್ಥಾಪನೆ,  ಅಧ್ಯಕ್ಷೆಯಾಗಿ ಸವಿತಾ ಅಮರಶೆಟ್ಟಿ ಆಯ್ಕೆ

Dharwada - Basavaraj Idli

ಹುಬ್ಬಳ್ಳಿ: ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಅಧ್ಯಕ್ಷೆಯಾಗಿ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಆಯ್ಕೆಯಾಗಿದ್ದಾರೆ.

ಇಲ್ಲಿಯ ಲಿಂಗರಾಜನಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಸಂಶೋಧಕರು, ಲೇಖಕರು, ಸಾಹಿತಿಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ನೂತನ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರು ಮಾತನಾಡಿ, ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿಯಾಗಿದ್ದಾರೆ. ಅಂದಿನಿಂದ ಮಹಿಳಾ ಸಾಹಿತ್ಯ ಬೆಳೆಯುತ್ತ ಬಂದಿದೆ. ಮಹಿಳೆಯರಲ್ಲಿ ಸಾಹಿತ್ಯ ಚಟುವಟಿಕೆಗಳು ಇದ್ದರೂ ಬೆಳಕಿಗೆ ಬರುವುದಿಲ್ಲ. ಸಾಹಿತ್ಯ ಸಮ್ಮೇಳನ, ಸಾಹಿತ್ಯ ಚಟುವಟಿಕೆಗಳು ಹಾಗೂ ಇತರ ಕನ್ನಡ ಪರ ಸಮಾರಂಭಗಳಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಯುತ್ತ ಸಂಸ್ಥೆ ಸ್ಥಾಪನೆ ಅನಿವಾರ್ಯವಾಗಿತ್ತು ಎಂದರು.

ಮಹಿಳಾ ಸಾಹಿತಿ ಹಾಗೂ ಬರಹಗಾರರಲ್ಲಿ ಪ್ರತಿಭಾವಂತರು ಇದ್ದಾರೆ. ಇಲ್ಲಿ ಲಿಂಗಭೇದ, ಪ್ರಾದೇಶಿಕ ತಾರತಮ್ಯದ ಬಗ್ಗೆ ಅಸಮಾಧಾನವಿದೆ. ಇದನ್ನು ಹೋಗಲಾಡಿಸಬೇಕು ಎಂದರು.

ಪರಿಷತ್ ಸಂಸ್ಥಾಪಕ ಮಾರ್ಗದರ್ಶಕ ಗಂಗಾಧರ ದೊಡ್ಡವಾಡ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಹಿಳಾ ಸಾಹಿತಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಆದ್ದರಿಂದ ಇವರಿಗೆ ಮತ್ತು ಅವರ ಪ್ರತಿಭೆಗೆ ತಕ್ಕಂತೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಲಾಗಿದೆ ಎಂದರು.

ಮಹಿಳಾ ಪರಿಷತ್ ಸರ್ವಾಧ್ಯಕ್ಷೆ ಹಾಗೂ ಸಂಶೋಧಕಿ ಡಾ. ಹನುಮಾಕ್ಷಿ ಗೋಗಿ ಮಾತನಾಡಿ, ಕನ್ನಡದಲ್ಲಿ ಸಾಕಷ್ಟು ಮಹಿಳಾ ಸಾಹಿತಿಗಳು, ಬರಹಗಾರರು ಇದ್ದಾರೆ. ಆದರೆ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಮರೆಯಲಾಗದ ಕೊಡುಗೆ ಕೊಟ್ಟ ಮಹಿಳೆಯರನ್ನ ಕಡೆಗಣಿಸಲಾಗುತ್ತಿದ್ದು, ಕೇವಲ ಪುರುಷರಿಗೆ ಮಣೆ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ತಾರಾದೇವಿ ವಾಲಿ, ಸುಜಾತಾ ರೆಡ್ಡಿ, ಮಂಗಳಾ ನರವಣಿ, ಪ್ರಭಾವತಿ ಮಠದ, ದಾಕ್ಷಾಯಣಿ ಬೀರವಳ್ಳಿ, ಕಮಲಮ್ಮಾ, ಸಂಗೀತಾ ದೇವದಾಸ್, ಜಯಲಕ್ಷ್ಮಿ ಉಮಚಗಿ, ಅನುಪಮ ಹಂಸಭಾವಿ, ಭಾರತಿ ವಾಲಿ, ಶಾರದಾ ಇದ್ಲಿ, ತೇಜಶ್ವಿನಿ ಬೆಂಗಳೂರು, ಉಮಾ ಸುತಗಟ್ಟಿ, ಉಮಾ ಅಕ್ಕೂರ, ವಿಜಯಾ ಗುಡಗೇರಿ, ಡಾ. ಶರಣಪ್ಪ ಕೊಟಗಿ, ಮುಂತಾದವರು ಭಾಗವಹಿಸಿದ್ದರು.

ಜಾನಪದ ಕಲಾವಿದ ಡಾ. ರಾಮು ಮೂಲಗಿ ಶಕ್ತೀಗಿತೆ ಹಾಡಿದರು. ವಿಜಯಲಕ್ಷ್ಮಿಟೊಂಗಳಿ ಸ್ವಾಗತಿಸಿದರು. ವಂದನಾ ಕರಾಳೆ ವಂದಿಸಿದರು.