ಜಿಲ್ಲೆ

ಮಹಿಳೆಯರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ

ಪಾಂಡವಪುರ: ಮಹಿಳೆಯರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದರೆ ಬಾಲ್ಯ ವಿವಾಹ ಸೇರಿದಂತೆ ಅನೇಕ ಅಪರಾಧ ಪ್ರಕರಣಗಳನ್ನು ತಡಗಟ್ಟಲು ಸಾಧ್ಯವಿದೆ ಎಂದು ಪಿಎಸ್‌ಐ ಸುಮಾರಾಣಿ ಹೇಳಿದರು.

ತಾಲೂಕಿನ ಜಕ್ಕನಹಳ್ಳಿ ನಾ.ಚ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಬಿ.ಸಿ.ಟ್ರಸ್ಟ್ ಮೇಲುಕೋಟೆ ಯೋಜನಾ ಕಚೇರಿಯಿಂದ ಮಹಿಳಾ ಜ್ಞಾನಾ ವಿಕಾಶ ಕಾರ್ಯಕ್ರದಡಿ ಮಂಗಳವಾರ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ 700 ರಿಂದ 800 ಪ್ರಕರಣ ದಾಖಲಾಗಿವೆ. ನಮ್ಮ ಸುತ್ತಮುತ್ತ ಎಲ್ಲೇ ಬಾಲ್ಯ ವಿವಾಹ ನಡೆದರೂ ಅದನ್ನು ತಡೆಯಲು ಮಹಿಳೆಯರು ಮುಂದಾಗಬೇಕು ಎಂದು ಹೇಳಿದರು.

ಮಹಿಳೆಯರು ಹಣ ಹಾಗೂ ಆಭರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿವಿಧ ಕಾರಣಗಳಿಂದ ವಂಚಿಸುವವರ ಕುರಿತು ಎಚ್ಚರಿಕೆಯಿಂದಿರಬೇಕು ಎಂದರು. ಹೆಣ್ಣುಮಕ್ಕಳಿಗೆ ಶಾಲಾ ಕಾಲೇಜು, ಕೆಲಸದ ಸ್ಥಳ, ಇತರ ಕಡೆಗಳಲ್ಲಿ ಕಿರುಕುಳ ಉಂಟಾದರೆ ಕಾವೇರಿ ಪಡೆ ಸಹಾಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಮಹಿಳೆಯರಿಗೆ ಹೆಚ್ಚಾಗುತ್ತಿರುವ ಕಿರುಕುಳದ ಬಗ್ಗೆ ಅರಿವು ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಳೆದ ಹತ್ತು ವರ್ಷದಿಂದ ಕಾರ್ಯಕ್ರಮ ಆಯೋಜಿಸುತ್ತಿದೆ. ಮಹಿಳೆಯರು ಜಾಗೃತಗೊಂಡ ಪರಿಣಾಮ ಅವರ ಮೇಲಿನ ದೌರ್ಜನ್ಯ ಪ್ರಕಣಗಳು ಕಡಿಮೆಯಾಗಿದೆ ಎಂದರು.

ಕೃಷಿ ಪ್ರಗತಿ ಯೋಜನೆಯಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ರಂಗೋಲಿ ಸ್ಪರ್ಧೆ, ಪೌಷ್ಟಿಕಾಂಶ ಆಹಾರ ತಯಾರಿಕೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ಮಹಿಳೆಯರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ವಕೀಲೆ ಮೈನಾವತಿ, ವೈದ್ಯೆ ಡಾ. ವರ್ಷಾ ಮಾತನಾಡಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಮುರಳೀಧರ್, ಯೋಜನಾಧಿಕಾರಿ ಸರೋಜಾ, ಜಿಲ್ಲಾ ಜನ ಜಾಗೃತಿ ಉಪಾಧ್ಯಕ್ಷ ಅಶ್ವಥ್‌ಕುಮಾರೇಗೌಡ, ನಿರ್ದೇಶಕ ಜೆ.ಪಿ.ಶಿವಶಂಕರ್, ಕನಕಲಕ್ಷ್ಮೀ ಇತರರು ಇದ್ದರು.