ಲಕ್ಷ್ಮೇಶ್ವರ: ಮಹಿಳೆ ತನ್ನ ಕುಟುಂಬದ ಪ್ರಗತಿಯ ಜತೆಗೆ ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಮೂಲಕ ಸುಭದ್ರ, ಸಮೃದ್ದ, ಸುಸಂಸ್ಕೃತ ರಾಷ್ಟ್ರ ನಿರ್ಮಾಣ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ಅದಕ್ಕಾಗಿ ಮಹಿಳೆಗೆ ಭಾರತದಲ್ಲಿ ಶ್ರೇಷ್ಠ ಸ್ಥಾನ ನೀಡಲಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಶನಿವಾರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಹಿಳೆಯರನ್ನು ಪೂಜನೀಯ, ಗೌರವ ಮತ್ತು ಸಮಾನತೆ ಭಾವನೆಯಿಂದ ಕಾಣಬೇಕು. ಮೊದಲ ಗುರುವಾದ ತಾಯಂದಿರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಗೌರವ ಭಾವನೆ ಮೂಡಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚನ್ನಮ್ಮ ಬೊಮ್ಮಾಯಿಯವರು ಮಾತನಾಡಿ, ಎಲ್ಲಿ ಮಹಿಳೆ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಭೂಮಿ, ನದಿ, ದೇವತೆಗಳ ಹಸರೇ ಹೆಣ್ಣಾಗಿರುವುದು ಹೆಣ್ಣಿನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಸಂತಾ ಹುಲ್ಲತ್ತಿ, ಡಾ.ಶೋಭಾ ನಿಶ್ಯಿಮಗೌಡರ ಮಾತನಾಡಿದರು. ಸುನಿತಾ ಮಂಜುನಾಥ ಮಾಗಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಮಾಜಿ ಅಧ್ಯಕ್ಷೆ ಜಯಕ್ಕ ಅಂದಲಗಿ, ಶಾರದಾ ಮಹಾಂತಶೆಟ್ಟರ, ಮಾಲಾದೇವಿ ದಂದರಗಿ, ಸರೋಜಾ ಡಾ.ಚಂದ್ರು ಲಮಾಣಿ, ಕೃತಿಕಾ ಮಾಗಡಿ, ಮಂಜುನಾಥ ಮಾಗಡಿ ಇತರರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಲಲಿತಾ ಕೆರಿಮನಿ ಅವರಿಗೆ ಸಮಾಜದ ಪರವಾಗಿ ಸುಕೃತಿಮಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಕ್ತಾ ಕಳಸಾಪುರ, ರತ್ನಾ ಕುಂಬಾರ, ಸ್ನೇಹಾ ಹೊಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಗಾಯಕವಾಡ, ರೇಖಾ ಘೋರ್ಪಡೆ, ಮೈತ್ರಾದೇವಿ ಹಿರೇಮಠ, ಎ.ಎಸ್.ಬೆನ್ನಾಳ, ಜಾಧವ ನಿರ್ಣಾಯಕರಾಗಿದ್ದರು.
ಸೂಪರ್ ಸಂಸಾರ ಸ್ಫರ್ಧೆಯಲ್ಲಿ ಪುಷ್ಪಾ ಪ್ರಭು ಅಣ್ಣಿಗೇರಿ ಪ್ರಥಮ, ಮುಕ್ತಾ ಮಲ್ಲು ಕಳಸಾಪುರ ದ್ವಿತೀಯ, ಸಹನಾ ಅನಿಲ ಮುಂಜಿ ತೃತೀಯ ಸ್ಥಾನ ಪಡೆದರು. ರಂಗೋಲಿ ಸ್ಫರ್ಧೆಯಲ್ಲಿ ಸಹನಾ ಮುಂಜಿ ಪ್ರಥಮ, ರಚನಾ ಮುಂಜಿ ದ್ವಿತೀಯ, ಅನ್ನಪೂರ್ಣೇಶ್ವರಿ ಹಿರೇಮಠ ತೃತೀಯ ಬಹುಮಾನ ಪಡೆದರು.