ಜಿಲ್ಲೆ

ಶ್ರೀ ಸಿದ್ಧರಾಮೇಶ್ವರ ಜಯಂತಿಗೆ ಅದ್ಧೂರಿ ಚಾಲನೆ

ತರೀಕೆರೆ: ಸೊಲ್ಲಾಪುರದಲ್ಲಿ ಶಿವಯೋಗಿ ಶ್ರೀಗುರು ಸಿದ್ಧರಾಮೇಶ್ವರರ 847ನೇ ಜಯಂತ್ಯುತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿದೆ. ಯಳನಾಡು ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ 7ಕ್ಕೆ ಷಟ್​ಸ್ಥಲ ಧ್ವಜಾರೋಹಣ ನೆರವೇರಿತು. ನೊಳಂಬ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ನಾಗರಾಜ್ ನಂದಿಧ್ವಜ ಹಾರಿಸಿದರು.

ಬೆಳಗ್ಗೆ 8ಕ್ಕೆ ಸೊಲ್ಲಾಪುರ ಸಮೀಪದ ತಮ್ಮಟದಹಳ್ಳಿ ಗೇಟ್​ನಿಂದ ಶ್ರೀಸಿದ್ಧರಾಮರ ಅಡ್ಡಪಲ್ಲಕ್ಕಿ ಉತ್ಸವ 1008 ಪೂರ್ಣ ಕುಂಭದೊಂದಿಗೆ ಶ್ರೀಸ್ವಾಮಿಯ ಅಡ್ಡಪಲ್ಲಕ್ಕಿಯನ್ನು ನಡೆ ಮಡಿ ಮೇಲೆ ಹೊತ್ತು ಭಕ್ತರು ಸಾಗಿದರು. 1008 ಮಹಿಳೆಯರು ಪೂರ್ಣಕುಂಭವನ್ನು ಶಿರದ ಮೇಲೆ ಹೊತ್ತು ತಮ್ಮಟದಹಳ್ಳಿ ಗೇಟ್​ನಿಂದ ಅಕ್ಕನಾಗಲಾಂಬಿಕೆ ವೇದಿಕೆಗೆ 20ಕ್ಕೂ ಹೆಚ್ಚು ಭಜನಾ ತಂಡಗಳ ಜತೆ ಆಗಮಿಸಿದರು.

2 ಗಂಟೆಗೂ ಹೆಚ್ಚು ಕಾಲ ನಡೆದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಗೊರವಿನ ಕುಣಿತ, ಡೊಳ್ಳು ಕುಣಿತ, ಚೋಮನ ಕುಣಿತ, ನಂದಿಧ್ವಜ ಕುಣಿತ, ಮುದ್ರೆ ಬಸವಗಳು, ನಗಾರಿ ವಾದ್ಯ, ಚಿಟ್ಟಿಮೇಳ, ಚಂಡೆವಾದ್ಯ, ಕೀಲು ಕುದುರೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ತಂಡಗಳು ಮೆರಗು ನೀಡಿದವು.